ಬೆಂಗಳೂರು, ಮಾ 29 (DaijiworldNews/DB): ಮೇ 10 ಮತದಾನದ ದಿನವಲ್ಲ, ಅಂದು ಭ್ರಷ್ಟಾಚಾರವನ್ನು ಬಡಿದೋಡಿಸುವ ದಿನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಹೊಸ ಸರ್ಕಾರ ಅವಶ್ಯವಿದೆ. ಅದನ್ನು ತರಲು ದಿನಾಂಕ ಘೋಷಣೆ ಮಾಡಲಾಗಿದೆ. ಮೇ 10 ಮತದಾನದ ದಿನವಲ್ಲ. ಭ್ರಷ್ಟಾಚಾರವನ್ನು ಬಡಿದೋಡಿಸುವ ದಿನವದು ಎಂದರು.
ರಾಜ್ಯದಲ್ಲಿ ಹೊಸ ನಾಡು ಕಟ್ಟಬೇಕು. ನವ ಕರ್ನಾಟಕಕ್ಕೆ ಹೊಸ ದಿಕ್ಕು ಸಿಗಬೇಕು. ಅದಕ್ಕಾಗಿ ಮೇ 10 ಸದ್ವಿನಿಯೋಗ ಆಗಲಿದೆ. ಡಬಲ್ ಎಂಜಿನ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಹೊಸ ಎಂಜಿನ್ ಶೀಘ್ರ ತಯಾರಾಗಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಜನರ ಭವಿಷ್ಯಕ್ಕೆ ಹೊಸ ದಿಕ್ಕು ತೋರಿಸಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನೀತಿ ಸಂಹಿತೆ ತುಂಬಾ ಹಿಂದೆಯೇ ಜಾರಿಯಾಗಬೇಕಿತ್ತು. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಇದೀಗ ಚುನಾವಣೆ ಘೋಷಣೆಯಾಗಿರುವುದರಿಂದ ಈಗ ನೀತಿ ಸಂಹಿತೆ ಜಾರಿಯಾಗಿದೆ ಎಂದವರು ತಿಳಿಸಿದರು.
ಗುಜರಾತ್ನಿಂದ ರಾಜ್ಯಕ್ಕೆ ಇವಿಎಂ ತರಿಸುವುದು ಬೇಡ ಎಂದು ನಾವು ಈ ಹಿಂದೆ ಪತ್ರ ಬರೆದಿದ್ದೆವು. ಸದ್ಯ ನಮ್ಮನ್ನು ಮಾತುಕತೆಗೆ ಆಹ್ವಾನಿಸಿರುವುದರಿಂದ ನಾವು ಚುನಾವಣಾ ಆಯೋಗದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದರು.