ಹೊಸದೆಹಲಿ,ಮಾ21(AZM):ಲೋಕಸಭಾ ಚುನಾವಣೆ ಹಿನ್ನೆಲೆ ದ.ಕ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಗ್ಗಂಟು ಮುಂದುವರಿದಿದೆ. ಜಿಲ್ಲಾ ನಾಯಕರು ಸೇರಿದಂತೆ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಶುಕ್ರವಾರ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ.
ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸೇರಿ ರಾಜ್ಯ ನಾಯಕರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರವರ ನಿವಾಸದಲ್ಲಿ ಒಂದು ಸುತ್ತಿನ ಸಭೆ ನಡೆದಿದ್ದು, ಸಭೆಯಲ್ಲಿ ಎಲ್ಲಾ ಆಕಾಂಕ್ಷಿಗಳು ಹಾಗೂ ಜಿಲ್ಲೆಯ ನಾಯಕರು ಭಾಗವಹಿಸಿದ್ದರು.
ಗುರುವಾರ ತಡರಾತ್ರಿ ಅಭ್ಯರ್ಥಿ ಯಾರು ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬರಲಿದ್ದು, ಶುಕ್ರವಾರ ಸಂಜೆಯೊಳಗೆ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಹೆಸರು ಅಂತಿಮವಾಗಿ ಕೇಳಿ ಬರುತ್ತಿದ್ದು ಇಬ್ಬರಲ್ಲಿ ಯಾರಿಗೆ ಹೈಕಮಾಂಡ್ ಮಣೆ ಹಾಕುತ್ತೆ ಅನ್ನುವುದಕ್ಕೆ ಶುಕ್ರವಾರ ಸಂಜೆ ಉತ್ತರ ದೊರಕಲಿದೆ.