ಇಂದೋರ್(ಮಧ್ಯಪ್ರದೇಶ), ಮಾ 30 (DaijiworldNews/DB): ಸ್ಟೆಪ್ ವೆಲ್ (ಮೆಟ್ಟಿಲುಗಳ ಬಾವಿ) ಮೇಲೆ ಹಾಕಲಾಗಿದ್ದ ಸಿಮೆಂಟ್ ಹಾಸು ಕುಸಿದು ಸುಮಾರು 25ಕ್ಕೂ ಹೆಚ್ಚು ಮಂದಿ ಭಕ್ತರು ಬಾವಿಯೊಳಗೆ ಬಿದ್ದಿದ್ದು ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ರಾಮ ನವಮಿ ದಿನದಂದು ಮಧ್ಯಪ್ರದೇಶದ ಇಂದೋರ್ ನ ಶ್ರೀಬೇಲೆಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ನಡೆದಿದೆ.
ಪಟೇಲ್ ನಗರದಲ್ಲಿರುವ ಈ ದೇವಸ್ಥಾನದಲ್ಲಿ ರಾಮ ನವಮಿ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಬಾವಿಯ ಮೇಲೆ ಹಾಸಿದ್ದ ಸಿಮೆಂಟ್ ಹಾಸು ಜನರ ಭಾರ ತಡೆಯಲಾಗದೆ ಕುಸಿದು ಬಿದ್ದಿದೆ. ಇದರಿಂದ ಅದರ ಮೇಲಿದ್ದವರೆಲ್ಲರೂ ಬಾವಿಯೊಳಗೆ ಬಿದ್ದಿದ್ದಾರೆ.
ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿ ಬಾವಿಯೊಳಗೆ ಬಿದ್ದ ಭಕ್ತರನ್ನು ರೋಪ್ ಬಳಸಿ ಮೇಲಕ್ಕೆತ್ತುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ. ಕನಿಷ್ಠ 13 ಮಂದಿ ಜೀವ ಕಳೆದುಕೊಂಡಿದ್ದು, 11 ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯ ತ್ವರಿತಗೊಳಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಭಕ್ತರನ್ನೆಲ್ಲಾ ದೇವಳದಿಂದ ಹೊರಗೆ ಕಳುಹಿಸಲಾಗಿದ್ದು, ದೇವಸ್ಥಾನ ಆವರಣ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ವರದಿಯಾಗಿದೆ.
ಮೃತರ ಕುಟುಂಬಗಳಿಗೆ ಸಿಎಂ ಶಿವರಾಜ್ ಚೌಹಾಣ್ ಅವರು ತಲಾ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.