ಬೆಂಗಳೂರು,ಏ 01 (DaijiworldNews/MS): ಗ್ಯಾಸ್ ಸೋರಿಕೆಯಾಗಿ ನಡೆದ ಅಗ್ನಿ ಅವಘಡದಲ್ಲಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಮೇಡಹಳ್ಳಿಯಲ್ಲಿ ನಡೆದಿದೆ.
ಮಾರ್ಚ್ 26ರಂದು ಭಾನುವಾರ ಮೇಡಹಳ್ಳಿಯ ಶೆಡ್ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಬಿಹಾರ ಮತ್ತುಉತ್ತರಪ್ರದೇಶದಿಂದ ಬಂದಿದ್ದ 7 ಮಂದಿ ಶೆಡ್ನಲ್ಲಿ ವಾಸವಾಗಿದ್ದರು. ಡ್ಯಾಮೇಜ್ ಆಗಿದ್ದ ಪೈಪ್ನಿಂದ ಎಲ್ಪಿಜಿ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅನಾಹುತ ನಡೆದಿದ್ದು ಅವಘಡ ಸಂಭವಿಸಿದ ದಿನ ಬೆಳಿಗ್ಗೆ 3.55 ರ ಸುಮಾರಿಗೆ ಎಲ್ಲಾ ಎಂಟು ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಚಿಕಿತ್ಸೆ ಪಡೆಯುತ್ತಿದ್ದ ಏಳು ಮಂದಿ ನರಳಿ ಪ್ರಾಣಬಿಟ್ಟಿದ್ದಾರೆ. ಸುಟ್ಟು ಗಾಯಗೊಂಡಿದ್ದ 8 ಕಾರ್ಮಿಕರಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು ನಿಕುನ್ ಅನ್ಸಾರಿ ಎಂಬ ಓರ್ವ ಕಾರ್ಮಿಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ದುರಾದೃಷ್ಟವಶಾತ್ ಸನೋಜ್ ಶರ್ಮಾ ಅಕಾ ಸನೋದ್, ಅಮಿತ್ ಕುಮಾರ್ ಮಂಡಲ್, ಚಂದ್ರ ಪಾಲ್, ತಿಲಕ್ ರಾಮ್, ನೀರಜ್ ಭಾರತಿ, ಲಕ್ಷ್ಮಣ ಮತ್ತು ಸುಮಯಾ ಗುಪ್ತಾ ಅಲಿಯಾಸ್ ಸಮಯ್ ಒಬ್ಬರ ನಂತರ ಒಬ್ಬರು ಶುಕ್ರವಾರದವರೆಗೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್, ’ಸುರಕ್ಷತಾ ಕ್ರಮಗಳಿಲ್ಲದೆ ಅನೇಕ ಕಾರ್ಮಿಕರನ್ನು ಸಣ್ಣ ಕೋಣೆಯಲ್ಲಿ ಉಳಿಯಲು ಅನುಮತಿಸಿದ ಕಟ್ಟಡದ ಮಾಲೀಕ ಭಾಸ್ಕರ್ ಹಾಗೂ ಗುತ್ತಿಗೆದಾರ ಗುಪ್ತಾ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.