ಬೆಂಗಳೂರು,ಮಾ 22(MSP): ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಬಿಜೆಪಿ ಪಕ್ಷ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಮೋದಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ತೀವ್ರ ಚರ್ಚೆಯಾಗುತ್ತಿದ್ದು ಕೆಲವರು ಈ ವಿಚಾರ ಹೌದೆಂದು ವಾದಿಸಿದರೆ, ಇನ್ನೊಂದಿಷ್ಟು ಮಂದಿ ಸುಳ್ಳುಸುದ್ದಿ ಎಂದಿದ್ದಾರೆ.
ಅಚ್ಚರಿಯ ವಿಚಾರ ಎಂದರೆ, ದಿ.ಅನಂತ್ ಕುಮಾರ್ ಅವರ ಮರಣಾ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅವರ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರನ್ನು ಅಖಾಡಕ್ಕೆ ಇಳಿಸುವ ನಿರ್ಧಾರಕ್ಕೆ ಬಿಜೆಪಿ ಬಂದಿತ್ತು. ಆದರೆ ಇದೀಗ ಈ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಗೆ ಟಿಕೆಟ್ ತಡೆಹಿಡಿದಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಬಹಿರಂಗ ಮಾಡದೇ ಇರುವುದು ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿದೆ.
ಈ ಬಾರಿ ಪ್ರಧಾನಿ ಮೋದಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಸ್ವರ್ಧಿಸುವುದು ಅಧಿಕೃತವಾಗಿದೆ. ಆದರೆ 2014ರ ಚುನಾವಣೆಯಂತೆ ಈ ಬಾರಿಯೂ ಮೋದಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಗೇಮ್ ಪ್ಲಾನ್ ಮಾಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.