ನವದೆಹಲಿ,ಮಾ 22(MSP): ಲೋಕಸಭೆ ಚುನಾವಣೆ ಸನಿಹದಲ್ಲಿರುವಂತೆ ಕಾಂಗ್ರೆಸ್ ಡೈರಿ ಬಾಂಬ್ ಹಾಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೇಂದ್ರ ನಾಯಕರಿಗೆ ಬೃಹತ್ ಮೊತ್ತವನ್ನು ಕಪ್ಪ ರೂಪದಲ್ಲಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು ಇದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮಾ.22ರ ಶುಕ್ರವಾರ ಡೈರಿಯೊಂದನ್ನು ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಬಿಎಸ್ ವೈ ಸಹಿ ಇರುವ ಡೈರಿ ಬಿಡುಗಡೆ ಮಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ ಅವರು,ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾರವಾನ್ ಮ್ಯಾಗಜಿನ್ ವರದಿಯನ್ನು ಆಧಾರಿಸಿ ಅವರು ಪತ್ರಿಕಾಗೋಷ್ಟಿ ನಡೆಸಿದ್ದು, ಈ ಡೈರಿಯ ಪ್ರತಿ ಪುಟದಲ್ಲಿ ಬಿ.ಎಸ್ ಯಡಿಯೂರಪ್ಪ ಅವರದೇ ಹಸ್ತಾಕ್ಷರದ ಬರಹದೊಂದಿಗೆ ಅವರ ಸಹಿ ಕೂಡಾ ಇದೆ. ಮಾತ್ರವಲ್ಲದೆ ಈ ಪ್ರಕರಣ ವಿಚಾರಣೆಗೆ ಯೋಗ್ಯವಾಗಿದ್ದು, ಹೊಸದಾಗಿ ನೇಮಕಗೊಂಡಿರುವ ಲೋಕಪಾಲರು ಈ ಡೈರಿಯ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಡೈರಿಯಲ್ಲಿ ಏನಿದೆ?
ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ 1 ಸಾವಿರ ಕೋಟಿ, ಅರುಣ್ ಜೇಟ್ಲಿ ಮತ್ತು ಗಡ್ಕರಿ ಅವರಿಗೆ 150 ಕೋಟಿ, ರಾಜನಾಥ್ ಸಿಂಗ್ ಅವರಿಗೆ 100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ 50 ಕೋಟಿ ರೂ. ಯಡಿಯೂರಪ್ಪ ನೀಡಿದ್ದಾರೆ. ನಿತಿನ್ ಗಡ್ಕರಿ ಮಗಳ ಮದುವೆಗೆ 10 ಕೋಟಿ ನೀಡಿದ್ದು, ತನ್ನ ವಿರುದ್ಧದ ಪ್ರಕರಣಗಳ ವಕಾಲತ್ತಿಗೆ 50 ಕೋಟಿ ರೂ. ಹಣವನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.