ಸಸಾರಾಮ್, ಏ 02 (DaijiworldNews/HR): ಬಿಹಾರದ ಸಸಾರಾಮ್ ನಲ್ಲಿ ರಾಮ ನವಮಿ ಘರ್ಷಣೆ ಬೆನ್ನಲ್ಲೇ ಬಾಂಬ್ ಸ್ಪೋಟ ನಡೆದು ಐವರು ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫಾರೆನ್ಸಿಕ್ ತಂಡವು ಸ್ಥಳಕ್ಕೆ ದೌಡಾಯಿಸಿದೆ ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಸಸಾರಾಮ್ ಡಿಎಂ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.
ಇನ್ನು ಸ್ಫೋಟ ನಡೆದ ಪ್ರದೇಶದಿಂದ ಒಂದು ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಾಥಮಿಕವಾಗಿ ಇದು ಕೋಮು ಘಟನೆಯಾಗಿ ಕಂಡುಬರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 31ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಬೇಕಿದ್ದ ನಳಂದದ ಬಿಹಾರಶರೀಫ್, ರೋಹ್ಯಾಸ್ನ ಸಸಾರಾಮ್ನಲ್ಲಿ ಘರ್ಷಣೆ ನಡೆದಿತ್ತು. ಜಿಲ್ಲೆಯಲ್ಲಿ ಘರ್ಷಣೆ ನಡೆದಿದ್ದ ಹಿನ್ನೆಲೆ ಸೆಕ್ಷನ್ 144 ಹೇರಲಾಗಿತ್ತು. ಮಾತ್ರವಲ್ಲದೇ ಅಮಿತ್ ಶಾ ಅವರ ಸಸಾರಾಮ್ ಭೇಟಿಯನ್ನೂ ರದ್ದುಗೊಳಿಸಲಾಗಿತ್ತು.
ಇನ್ನು "ಜನರಿಗೆ ಶಾಂತವಾಗಿರಲು ನಾವು ಮನವಿ ಮಾಡುತ್ತೇವೆ. ತೊಂದರೆ ಉಂಟುಮಾಡುವವರನ್ನು ಗುರುತಿಸಲು ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದೇವೆ" ಎಂದು ನಳಂದಾ ಮ್ಯಾಜಿಸ್ಟ್ರೇಟ್ ಶಶಾಂಕ್ ಶುಭಂಕರ್ ಎಚ್ಚರಿಸಿದ್ದಾರೆ.