ನವದೆಹಲಿ, ಏ 02 (DaijiworldNews/SS): ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತದ 45 ಲಕ್ಷ ನಕಲಿ ವಾಟ್ಸಪ್ ಖಾತೆಯನ್ನು ನಿಷೇಧಿಸಲಾಗಿದೆ.
ಮೆಟಾ ಒಡೆತನದ ವಾಟ್ಸಪ್ 2021ರ ಹೊಸ ಐಟಿ ನಿಯಮಗಳ ಅನುಸಾರವಾಗಿ, ಭಾರತದಲ್ಲಿದ್ದ 45 ಲಕ್ಷಕ್ಕೂ ಹೆಚ್ಚು ವಾಟ್ಸಪ್ ಖಾತೆಯನ್ನು ನಿಷೇಧಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸಪ್ ಕಂಪೆನಿ, 'ಫೆಬ್ರವರಿ 1ರಿಂದ ಫೆಬ್ರವರಿ 28ರವೆರೆಗೆ 45,97,400 ವಾಟ್ಸಪ್ ಖಾತೆಗಳು ಬ್ಯಾನ್ ಆಗಿದೆ. ಅಲ್ಲದೇ, ವಾಟ್ಸಪ್ ಬಳಕೆದಾರರು ರಿಪೋರ್ಟ್ ಮಾಡುವ ಮೊದಲೇ 12,98,000 ಖಾತೆಗಳನ್ನು ನಿಷೇಧಿಸಲಾಗಿದೆ' ಎಂದು ಹೇಳಿದೆ.
ಭಾರತದಲ್ಲಿ 500 ಮಿಲಿಯನ್ಗೂ ಹೆಚ್ಚು ಜನ ಈ ಜನಪ್ರಿಯ ಸಂದೇಶವಾಹಕ ವೇದಿಕೆಯಾಗಿರುವ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ. ಅಲ್ಲದೇ, ಫೆಬ್ರವರಿಯಲ್ಲಿ ವಾಟ್ಸಪ್ ಬಳಕೆದಾರರು 2,804 ದೂರುಗಳನ್ನು ನೀಡಿದ್ದು, 504 ದೂರಗಳನ್ನು ಸ್ವೀಕರಿಸಿ, ಸಮಸ್ಯೆ ಪರಿಹಾರ ಮಾಡಿದ್ದಾರೆ.
ಈ ಬಗ್ಗೆ ವಾಟ್ಸಪ್ ಕಂಪನಿಯ ವಕ್ತಾರರು ಪ್ರತಿಕ್ರಿಯಿಸಿ, "ವಾಟ್ಸಪ್ ಬಳಕೆದಾರ ಸುರಕ್ಷತಾ ವರದಿಯು, ಬಳಕೆದಾರರ ದೂರನ್ನು ಸ್ವೀಕರಿಸಿ ಅದರ ಅನುಗುಣವಾಗಿ ಕ್ರಮ ಕೈಗೊಂಡಿದೆ. ಅಲ್ಲದೇ ವಾಟ್ಸಪ್ ಬಗ್ಗೆ ಇರುವ ದೂರುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತಿದೆ. ಈ ಕೆಲಸದಲ್ಲಿ ನಾವು ಪಾರದರ್ಶಕತೆ ಮುಂದುವರಿಸಿದ್ದೇವೆ" ಎಂದಿದ್ದಾರೆ..
ಇನ್ನು ಭಾರತದಲ್ಲಿ ಸಾಮಾಜಿಕ ಜಾಲತಾಣ ಬಳಸುವ ಲಕ್ಷಾಂತರ ಮಂದಿಯನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ, ಐಟಿ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಕುಂದು ಕೊರತೆಗಳ ನಿವಾರಣೆಗಾಗಿ ಮೇಲ್ಮನವಿ ಸಮಿತಿಯನ್ನ ರಚಿಸಿದ್ದಾರೆ. ಈ ಸಮಿತಿಯು ದೊಡ್ಡ ತಾಂತ್ರಿಕ ಕಂಪೆನಿಗಳನ್ನು ಪಳಗಿಸಲು, ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾಗಿದೆ. ಈ ಮೂಲಕವಾಗಿ ನಾವು ಸಾಮಾಜಿಕ ಜಾಲತಾಣಗಳ ಬಳಕೆದಾರರು ನೀಡುವ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ಇದು ಸಹಾಯಕವಾಗಿದೆ.