ಬೆಂಗಳೂರು, ಏ 02 (DaijiworldNews/MS): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಎರಡನೇ ಪಟ್ಟಿ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದೆ.
ಟಿಕೆಟ್ಗಾಗಿ ಅಭ್ಯರ್ಥಿಗಳ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ಗೆ ನಾಲ್ಕು ಕ್ಷೇತ್ರಗಳಲ್ಲಿ ಇನ್ನು ಕೂಡ ಸಮರ್ಥ ಅಭ್ಯರ್ಥಿಗಳು ಲಭ್ಯವಾಗಿಲ್ಲ ಎಂದು ವರದಿಯಾಗಿದೆ.
ಜೆಡಿಎಸ್ ಭ್ರದ್ರಕೋಟೆ ಚನ್ನಪಟ್ಟಣ, ಯಶವಂತಪುರ, ಕೆಆರ್ ಪುರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಇನ್ನು ಕೂಡ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೊನ್ನೆ ನಡೆದ ಪಕ್ಷದ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿಯೂ ಗಂಭೀರ ಚರ್ಚೆಯಾಗಿದ್ದು, ಈ ಹಿಂದೆ ಆಸಕ್ತಿ ತೋರಿಸಿದ್ದ ಅಭ್ಯರ್ಥಿಗಳು ಈಗ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ನಾಲ್ಕೂ ಕಡೆಯೂ ಬೇರೆ ಪಕ್ಷದ ಘಟಾನುಘಟಿ ನಾಯಕರು ಕಣದಲ್ಲಿರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಯಶವಂತಪುರದಲ್ಲಿ ಎಸ್ಟಿ ಸೋಮಶೇಖರ್, ಕೆಆರ್ ಪುರದಿಂದ ಭೈರತಿ ಬಸವರಾಜ್, ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳು ಎದುರಿಸಬೇಕಾಗುತ್ತದೆ. ಇನ್ನು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಣದಲ್ಲಿದ್ದಾರೆ.