ಗುವಾಹಟಿ, ಮಾ (DaijiworldNews/HR): ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಖಲೀಸಾತಾನ್ ಪರ ಸಂಘಟನೆಯಿಂದ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.
ಹಿಮಂತ ಬಿಸ್ವಾ ಶರ್ಮಾ ಅವರಿಗೆ ಖಲಿಸ್ತಾನಿ ಪರ ನಾಯಕರೊಬ್ಬರು ಆಡಿಯೊ ಕ್ಲಿಪ್ನಲ್ಲಿ ಬೆದರಿಕೆ ಹಾಕಿದ್ದು, ಬೆದರಿಕೆಯ ಬಳಿಕ ಅಸ್ಸಾಂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಈ ಬಗ್ಗೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ರಾಜ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆಡಿಯೋ ಕ್ಲಿಪ್ನಲ್ಲಿ ಆ ವ್ಯಕ್ತಿ ತಾನು ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಎಂದು ಹೇಳಿಕೊಂಡಿದ್ದಾನೆ.
ಇನ್ನು "ಈ ಸಂದೇಶ ಅಸ್ಸಾಂ ಸಿಎಂ ಹಿಮಂತ ಶರ್ಮಾ ಅವರಿಗೆ. ನಿಮ್ಮ ಸರ್ಕಾರ ಅಸ್ಸಾಂನಲ್ಲಿ ಖಲಿಸ್ತಾನ್ ಪರ ಸಿಖ್ಖರಿಗೆ ಕಿರುಕುಳ ನೀಡುತ್ತಿದೆ ಮತ್ತು ಚಿತ್ರಹಿಂಸೆ ನೀಡುತ್ತಿದೆ. ಜೊತೆಗೆ ಜೈಲಿನಲ್ಲಿರುವವರಿಗೂ ಚಿತ್ರಹಿಂಸೆ ನೀಡುತ್ತಿದೆ. ಎಚ್ಚರಿಕೆಯಿಂದ ಆಲಿಸಿ ಸಿಎಂ ಶರ್ಮಾ, ಖಲಿಸ್ತಾನ್ ಪರ ಸಿಖ್ಖರು ಮತ್ತು ಭಾರತೀಯ ಆಡಳಿತದ ನಡುವಿನ ಹೋರಾಟ. ಈ ವಿಚಾರದಲ್ಲಿ ತಲೆಹಾಕಬೇಡಿ" ಎಂದಿದ್ದಾನೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೇ, ನಿಮ್ಮ ಸರ್ಕಾರವು ಸಿಖ್ಖರನ್ನು ಹಿಂಸಿಸಿ ಕಿರುಕುಳ ನೀಡಲು ಹೋದರೆ ನೀವು ಹೊಣೆಗಾರರಾಗಿರುತ್ತೀರಿ ಎಂದು ಹೇಳಿದ್ದಾನೆ.