ಕನಕಗಿರಿ, ಏ 02 (DaijiworldNews/MS): ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಸೇರಿದಂತೆ ಐದು ಜನರ ವಿರುದ್ಧ ಸೋಮವಾರ ಎಫ್ಐಆರ್ ದಾಖಲಾಗಿದೆ.
ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಸಾರ್ವಜನಿಕರ ಬಳಕೆಗೆ ನೀಡಲಾಗಿದ್ದ ಆಂಬುಲೆನ್ಸ್ ಅನ್ನು ಅಧಿಕಾರಿಗಳು ಕನಕಗಿರಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ರಾತ್ರಿ ವಶಪಡಿಸಿಕೊಂಡಿದ್ದರು. ಇದರಲ್ಲಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ, ಬಳ್ಳಾರಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅರುಣಾ ಲಕ್ಷ್ಮೀ ಹಾಗೂ ಕನಕಗಿರಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಡಾ.ವೆಂಕಟರಮಣ ಭಾವಚಿತ್ರಗಳತ್ತು.
ಕನಕಗಿರಿ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿ ವೆಂಕಟರಮಣ ದಾಸರಿ, ಆಂಬುಲೆನ್ಸ್ ವಾಹನದ ಮಾಲೀಕ ಜಿ. ನವೀನಕುಮಾರ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣಾ ಮತ್ತು ಆಂಬುಲೆನ್ಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನುಮತಿ ಪಡೆಯದೇ ಕಲ್ಯಾಣ ಪ್ರಗತಿ ಪಕ್ಷಕ್ಕೆ ಸೇರಿದ ವಾಹನ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿತ್ತು. ಆದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.