ಬೆಂಗಳೂರು, ಏ 02 (DaijiworldNews/MS): ಹಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ದಿನಾಂಕ ಘೋಷಣೆಗೂ ಮುನ್ನವೇ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಇನ್ನು ಇಂದು ಮಧ್ಯಾಹ್ನ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಲಿದೆ.
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಇನ್ನು ಮುಂದುವರೆದಿದೆ. ಹೀಗಾಗಿ 2ನೇ ಲಿಸ್ಟ್ನಲ್ಲೂ ಹಾಸನ ಟಿಕೆಟ್ ಅಭ್ಯರ್ಥಿ ಘೋಷಣೆಯಾಗುವುದು ಅನುಮಾನ.ಹಾಸನ ಟಿಕೆಟ್ಗಾಗಿ ಪಟ್ಟು ಹಿಡಿದು ಭವಾನಿ ರೇವಣ್ಣ ಕುಳಿತಿದ್ದಾರೆ ಆದರೆ ಕುಮಾರಸ್ವಾಮಿ ಮಾತ್ರ ಟಿಕೆಟ್ ಆಕಾಂಕ್ಷಿ ಹೆಚ್ ಪಿ ಪರವೇ ಬ್ಯಾಟ್ ಮಾಡಿದ್ದಾರೆ.
ಪರಿಸ್ಥಿತಿ ಕೈಮೀರುವ ಮುನ್ನವೇ ಎಚ್ಚೆತ್ತಿರುವ ದೇವೇಗೌಡರರು ಪದ್ಮನಾಭನಗರದ ನಿವಾಸದಲ್ಲಿ ಫ್ಯಾಮಿಲಿ ಸಭೆ ನಡೆಸಿದ್ದಾರೆ. ತಡರಾತ್ರಿ 2 ಗಂಟೆಗಳ ಕಾಲ ಸಂಧಾನ ಸಭೆ ನಡೆದಿದ್ದು, ಭವಾನಿ ರೇವಣ್ಣ ಸಂಧಾನಕ್ಕೆ ಒಪ್ಪದೆ ಮುನಿಸಿನಿಂದಲೇ ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಹಾಸನ ಜೆಡಿಎಸ್ ಟಿಕೆಟ್ ಗೊಂದಲ ಹಾಗೆ ಮುಂದುವರಿದಿದ್ದು, ಅಂತಿಮವಾಗಿ ಹಾಸನದ ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿದೆ.