ಕಾರವಾರ, ಮಾ 22(SM): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೆ 7ನೇ ಬಾರಿಯೂ ಪಕ್ಷ ಮಣೆ ಹಾಕಿದೆ.
ಈ ಹಿಂದೆ ಸ್ಪರ್ಧಿಸಿದ್ದ 6 ಚುನಾವಣೆಗಳಲ್ಲಿ 5ರಲ್ಲಿ ಅವರು ಗೆಲುವು ದಾಖಲಿಸಿಕೊಂಡಿದ್ದಾರೆ. ಇದೀಗ ಏಳನೇ ಬಾರಿ ಸ್ಪರ್ಧೆಗೆ ಮತ್ತೆ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ.ವಿವಾದಾತ್ಮಕ ಹೇಳಿಕೆಗಳಿಂದ ಹೆಸರುವಾಸಿಯಾಗಿದ್ದ ಅನಂತ್ ಕುಮಾರ್ ಅವರಿಗೆ 7ನೇ ಬಾರಿ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿತ್ತು.
ಅಲ್ಲದೆ ಅವರ ಬದಲು ಬೇರೆ ನಾಯಕನಿಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಕೂಡ ಒತ್ತಾಯಿಸಿದ್ದರು. ಅವರ ಬದಲು ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.
ಈ ನಡುವೆ ಆ ಕ್ಷೇತ್ರದಿಂದ ಬದಲಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಆದರೆ, ಹಾಲಿ ಸಂಸದರಿಗೆ ಅವಕಾಶ ನೀಡುವ ನಿಲುವು ತಳೆದ ಪಕ್ಷದ ವರಿಷ್ಠರು, ಯಾವುದೇ ಒತ್ತಡಗಳಿಗೂ ಮಣಿಯದೇ ಅನಂತಕುಮಾರ ಹೆಗಡೆಯವರನ್ನೇ ಘೋಷಣೆ ಮಾಡಿದ್ದಾರೆ.