ನವದೆಹಲಿ, ಏ 04 (DaijiworldNews/HR): ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನ ತೆಗೆದುಕೊಂಡಿದ್ದು, ಕೆಲವು ಸರಕುಗಳ ಬೆಲೆಗಳು ಇಳಿದಿದ್ದು, ಮತ್ತೆ ಕೆಲವು ಸರಕುಗಳ ಬೆಲೆಗಳು ಏರಿಕೆಯಾಗಿವೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಔಷಧಗಳ ಬೆಲೆ ಏರಿಕೆಯ ಸುದ್ದಿಯಿಂದ ಜನರು ಬೇಸತ್ತಿದ್ದು, ಇದೀಗ 651 ಅಗತ್ಯ ಔಷಧಿಗಳ ಬೆಲೆಯನ್ನ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಸರಾಸರಿ ಶೇ.6.73 ರಷ್ಟು ಕಡಿಮೆ ಮಾಡಲಾಗಿದೆ ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ತಿಳಿಸಿದೆ.
ಇನ್ನು ಆರೋಗ್ಯ ಸಚಿವಾಲಯವು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನ ತಿದ್ದುಪಡಿ ಮಾಡಿತ್ತು. ಇದರಲ್ಲಿ ಒಟ್ಟು 870 ಔಷಧಗಳನ್ನ ಸೇರಿಸಲಾಗಿದ್ದು, ಇವುಗಳಲ್ಲಿ 651 ಅಗತ್ಯ ಔಷಧಿಗಳ ಬೆಲೆಯಲ್ಲಿ ಮಿತಿ ಮಿತಿಯನ್ನ ನಿಗದಿಪಡಿಸಲಾಗಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಔಷಧಿಗಳ ಬೆಲೆಯಲ್ಲಿನ ಕಡಿತದ ದೊಡ್ಡ ಫಲಾನುಭವಿ ಗ್ರಾಹಕರು. ಹಿಂದಿನ ಅಂಕಿಅಂಶಗಳನ್ನು ಗಮನಿಸಿದರೆ, ಸಗಟು ಬೆಲೆ ಸೂಚ್ಯಂಕ ಆಧಾರದ ಮೇಲೆ ಔಷಧಿಗಳ ಬೆಲೆಯಲ್ಲಿ ವಾರ್ಷಿಕ ಶೇ.12.12ರಷ್ಟು ಏರಿಕೆಯಾಗಿದೆ.