ನವದೆಹಲಿ, ಏ 04 (DaijiworldNews/HR): ರೋಗಿಗಳು ಮತ್ತು ಅವರಿಗೆ ಸಂಬಂಧಿಸಿದ ಮಾಹಿತಿಯನ್ನು ಅನಗತ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಮ್ಸಿ)ಯು ವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಳಿಸಿದೆ.
ವೈದ್ಯಕೀಯ ಶಿಕ್ಷಕರಿಗೆ ತನ್ನ ಮಾರ್ಗಸೂಚಿಗಳಲ್ಲಿ, ವೈದ್ಯರು-ರೋಗಿಗಳ ಸಂಬಂಧದ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾದ ವಿಷಯಗಳನ್ನ ಕಲಿಸಬೇಕು ಮತ್ತು ರೋಗಿಗಳ ಘನತೆ ಮತ್ತು ಹಕ್ಕುಗಳಿಗೆ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದೆ.
ಇನ್ನು ವಿದ್ಯಾರ್ಥಿಗಳು ಸ್ಥಳೀಯ ಭಾಷೆಯನ್ನ ಕಲಿಯುವ ಅಗತ್ಯವನ್ನ. ಇದರಿಂದ ಅವರು ರೋಗಿಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಬಹುದು ಮತ್ತು ಸಮುದಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಎಲ್ಲಾ ವೃತ್ತಿಪರ ಕೆಲಸದ ಸಮಯದಲ್ಲಿ ಯೋಗ್ಯ ಮತ್ತು ಸರಿಯಾದ ಬಟ್ಟೆಗಳನ್ನ ಧರಿಸುವ ನಿರೀಕ್ಷೆಯಿದೆ ಎಂದಿದೆ.
ತಮ್ಮ ಕ್ಲಿನಿಕಲ್ ತರಬೇತಿಯ ಸಮಯದಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳು ರೋಗಿಗಳ ಮುಂದೆ ನಯವಾಗಿ ವರ್ತಿಸಬೇಕು. ಮಾರ್ಗದರ್ಶಿ ಸೂತ್ರಗಳಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಬಗ್ಗೆ ಕಾಳಜಿ ವಹಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನ ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ, ವಿಶೇಷವಾಗಿ ಆಲ್ಕೋಹಾಲ್, ತಂಬಾಕು ಮುಂತಾದ ಇತರ ಪದಾರ್ಥಗಳನ್ನ ತಪ್ಪಿಸುವ ಮೂಲಕ. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ಸಂದರ್ಭದಲ್ಲಿ ಚಿಕಿತ್ಸೆ ಮತ್ತು ಸಮಾಲೋಚನೆಯನ್ನ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದೆ.
ಮಾರ್ಗದರ್ಶಿ ಸೂತ್ರಗಳು ವಿದ್ಯಾರ್ಥಿಗಳು ತಮ್ಮ ಎಂಬಿಬಿಎಸ್ ಕೋರ್ಸ್ನಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿದೆ.