ಛತ್ತೀಸಗಢ, ಏ.04 (DaijiworldNews/SM): ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಸ್ಫೋಟಗೊಂಡು ವರ ಹಾಗೂ ಆತನ ಸಹೋದರ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ನಕ್ಸಲ್ ಪೀಡಿತ ರೇಂಗಾಖರ್ ಜಂಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಉಡುಗೊರೆಯಾಗಿ ಹೋಮ್ ಥಿಯೇಟರ್ ಬಂದಿತ್ತು. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಗೀತ ಕೇಳಲು ವರ ಹೋಮ್ ಥಿಯೇಟರ್ ಆನ್ ಮಾಡಿದ ತಕ್ಷಣ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ವರನು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಸ್ಫೋಟದ ತೀವ್ರತೆ ಕೊಠಡಿಯಲ್ಲಿ ಇರಿಸಲಾಗಿದ್ದ ಕಪಾಟುಗಳು, ಪಾತ್ರೆಗಳು, ಉಡುಗೊರೆ ವಸ್ತುಗಳು ಛಿದ್ರವಾಗಿವೆ. ಅಷ್ಟೇ ಅಲ್ಲ ಕೊಠಡಿಯ ಗೋಡೆ ಕುಸಿದು 30ರಿಂದ 40 ಅಡಿ ದೂರಕ್ಕೆ ಹೆಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದಲ್ಲಿ 24 ವರ್ಷದ ವರ ಹಮೇಂದ್ರ ಮತ್ತು ಅವರ ಹಿರಿಯ ಸಹೋದರ 30 ವರ್ಷದ ರಾಜ್ಕುಮಾರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಗಾಯಗೊಂಡವರಲ್ಲಿ ಮೃತ ರಾಜಕುಮಾರ್ ಪುತ್ರ 3 ವರ್ಷದ ಸೌರಭ್, 22 ವರ್ಷದ ಸೂರಜ್, 25 ವರ್ಷದ ಶಿವ, 25 ವರ್ಷದ ಮೋಹನ್ ಸಿಂಗ್ ಮೆರವಿ, 18 ವರ್ಷದ ಅಜಿತ್ ಸಿಂಗ್, 20 ವರ್ಷದ ಶೇರ್ ಸಿಂಗ್ ಎಂದು ತಿಳಿದುಬಂದಿದೆ. ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ಕವರ್ಧಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಗ್ರಾಮದ ಜನರು ಕೂಡ ಅಚ್ಚರಿಗೊಂಡಿದ್ದು, ನಾನಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.