ಮುಂಬೈ, ಏ 05 (DaijiworldNews/MS): ಕೋಯಿಕ್ಕೋಡ್ನಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಬೆಂಕಿ ಹಚ್ಚಿ ಮೂವರು ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಪ್ರಮುಖ ಆರೋಪಿ ಶಾರುಖ್ ಸೈಫಿಯನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.
ಈ ಭೀಕರ ಪ್ರಕರಣದಲ್ಲಿ ಮೂವರ ಸಾವು ಮಾತ್ರವಲ್ಲದೇ 9 ಜನರು ಗಾಯಗೊಂಡಿದ್ದರು. ಕೊಯಿಕ್ಕೋಡ್ನಲ್ಲಿ ಅಳಪುಳಾ- ಕಣ್ಣೂರ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ವಿಶೇಷ ತನಿಖಾ ದಳ ತನ್ನ ಹುಡುಕಾಟವನ್ನು ತೀವ್ರಗೊಳಿಸಿತ್ತು.
ಆರೋಪಿ ಶಾರುಖ್ ಸೈಫಿ ನೊಯ್ಡಾ ಮೂಲದವನಾಗಿದ್ದು, ಮಂಗಳವಾರ ಆತ ರತ್ನಗಿರಿಯಲ್ಲಿದ್ದಾನೆಂಬ ಲೊಕೇಷನ್ ಪತ್ತೆಯಾಗಿತ್ತು. ರೈಲಿಗೆ ಬೆಂಕಿ ಹಚ್ಚಿ ಅಲ್ಲಿಂದ ಕೆಳಗೆ ಜಿಗಿಯುವಾಗ ಆತನ ತಲೆಗೆ ಗಾಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯಲು ಆತ ರತ್ನಾಗಿರಿ ಜಿಲ್ಲಾಸ್ಪತ್ರೆಗೆ ತೆರಳಿದ್ದ. ಆದರೆ, ಅಲ್ಲಿ ಪೂರ್ತಿ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಪರಾರಿಯಾಗಿದ್ದ. ಬಳಿಕ ರತ್ನಾಗಿರಿಯಲ್ಲಿ ಆತನಿಗಾಗಿ ತೀವ್ರ ಶೋಧ ನಡೆಸಲಾಯಿತು ಕೊನೆಗೆ ಆತ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯಕ್ಕೆ ರತ್ನಾಗಿರಿ ಆರ್ಪಿಎಫ್ ವಶದಲ್ಲಿರುವ ಆತನನ್ನು ಕೇರಳ ಪೊಲೀಸರು ಶೀಘ್ರವೇ ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ.