ಬೆಂಗಳೂರು, ಏ 05 (DaijiworldNews/MS): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂನಲ್ಲಿದ್ದರೂ ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಗಡಿಯಲ್ಲಿರುವ ಕೆಲವರಿಗೆ ವಿಮೆ ನೀಡುವ ಆದೇಶ ಮಾಡಿರುವುದು ಉದ್ಧಟತನದ ಪರಮಾವಧಿಯಾಗಿದ್ದು ಇದು 2 ರಾಜ್ಯಗಳ ನಡುವಿನ ಬಾಂಧವ್ಯ ಕದಡುವ ಪ್ರಯತ್ನ. ಮಹಾರಾಷ್ಟ್ರ ಉದ್ಧಟತನ ಮುಂದುವರಿಸಿದರೆ ಕರ್ನಾಟಕ ಸರ್ಕಾರವೂ ಗಡಿ ಕನ್ನಡಿಗರ ರಕ್ಷಣೆಗೆ ವಿಮೆ ಜಾರಿಗೊಳಿಸಬೇಕಾಗುತ್ತದೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗಡಿ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದರು.
ಈಗ ಕರ್ನಾಟಕದ 865 ಗ್ರಾಮಗಳ ಜನತೆಗೆ ಜ್ಯೊತಿರಾವ್ ಫುಲೆ ಜನ ಆರೋಗ್ಯ ಯೋಜನೆ ಜಾರಿಗೆ ಆದೇಶ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವಾಗಿದೆ. ಮಹಾರಾಷ್ಟ್ರ ಸರ್ಕಾರ ತಕ್ಷಣ ತನ್ನ ಆದೇಶವನ್ನು ವಾಪಸ್ ಪಡೆದು, ಅಮಿತ್ ಶಾ ಅವರ ಸೂಚನೆಗೆ ಗೌರವ ಕೊಡುವ ಮೂಲಕ ಎರಡೂ ರಾಜ್ಯಗಳ ನಡುವಿನ ಬಾಂಧವ್ಯ ಕಾಪಾಡುವ ಕೆಲಸ ಮಾಡಬೇಕು.
ಮಹಾರಾಷ್ಟ್ರ ಸರ್ಕಾರ ಇದೇ ರೀತಿ ಉದ್ದಟತನ ಮುಂದುವರೆಸಿದರೆ ಕರ್ನಾಟಕ ಸರ್ಕಾರವೂ ಕೂಡ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿಯ ವಿಮೆ ಜಾರಿಗೊಳಿಸಲಾಗುವುದು.ಕರ್ನಾಟಕ ಗಡಿಯಲ್ಲಿರುವ ಜನರಿಗೆ ವಿಮೆ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ, ಅವರಿಂದ ಮಹಾರಾಷ್ಟ್ರಕ್ಕೆ ಸೇರಿದವರೆಂದು ಘೋಷಣಾ ಪತ್ರ ತೆಗೆದುಕೊಳ್ಳುವುದು ಖಂಡನೀಯ ಎಂದು ಹೇಳಿದ್ದಾರೆ.