ನವದೆಹಲಿ,ಮಾ 23(MSP): ಪುಲ್ವಾಮಾ ದಾಳಿ ಬಲಿಕ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿ ನಾಯಕರನ್ನು ಮಟ್ಟಹಾಕುತ್ತಿರುವ ಕೇಂದ್ರ ಸರ್ಕಾರ ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು, ಯಾಸಿನ್ ಮಲಿಕ್ ನೇತೃತ್ವದ ಪ್ರತ್ಯೇಕತಾವಾದಿ ಜಮ್ಮು - ಕಾಶ್ಮೀರ ಲಿಬರೇಷನ್ ಫ್ರಂಟ್ ಸಂಘಟನೆಯನ್ನು ನಿಷೇಧಿಸಿದೆ.
ಪ್ರಧಾನಿ ನೇತೃತ್ವದಲ್ಲಿ ನಡೆದ ಭದ್ರತೆ ವಿಭಾಗದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನದ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಪಾಕಿಸ್ತಾನದ ಇಸ್ಲಾಮಾಬಾದ್ ಗೆ ಆಹ್ವಾನಿಸಿತ್ತು. ಈ ದಿನಾಚರಣೆ ನಡೆದ ಮಾ.22 ರಂದೇ ಕೇಂದ್ರ ಈ ಕ್ರಮ ಕೈಗೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಜಮಾತೆ ಇಲಾಮಿ ಸಂಘಟನೆಯನ್ನು ಬ್ಯಾನ್ ಮಾಡಿತ್ತು. ಈಗ ಇದರ ಸಾಲಿಗೆ ಜೆಕೆಎಲ್ ಎಫ್ ಸೇರ್ಪಡೆಯಾಗಿದೆ.
ಭಯೋತ್ಪಾನೆಯ ಬಗ್ಗೆ ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಖಾತೆ ಕಾರ್ಯದರ್ಶಿ ರಾಜೀವ್ ಗೌಬಾ ಹೇಳಿದ್ದಾರೆ.
ಜೆಕೆಎಲ್ ಎಫ್ ಸಂಘಟನೆ ಕಾಶ್ಮೀರಿ ಪಂಡಿತರ ಮೇಲೆ ದಬ್ಬಾಳಿಕೆ ಸೇರಿ ಅನೇಕ ದುಷ್ಕೃತದಲ್ಲಿ ತೊಡಗಿಸಿಕೊಂಡಿತ್ತು. 1988 ರಿಂದ ಸಕ್ರಿಯವಾಗಿರುವ ಈ ಸಂಘಟನೇ ಮೇಲೆ ೩೭ ಎಫ್ ಐ ಆರ್ ಗಳು ದಾಖಲಾಗಿದೆ. ಪ್ರತ್ಯೇಕತಾವಾದಿ ಜಮ್ಮು - ಕಾಶ್ಮೀರ ಲಿಬರೇಷನ್ ಫ್ರಂಟ್ ಸಂಘಟನೆ ನಾಯಕ ಯಾಸಿನ್ ಮಲಿಕ್ ನ್ನು ಫೆ.೨೨ ರಂದು ಬಂಧಿಸಿ ಕೋಟ್ ಬಲ್ವಾಲ್ ಜೈಲಿನಲ್ಲಿ ಇರಿಸಲಾಗಿದೆ.