ನವದೆಹಲಿ,ಏ 07 (DaijiworldNews/MS): "ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ಬಹುದೊಡ್ಡ ಅಪಾಯ" ಎಂದು ನವದೆಹಲಿಯ ಮಾಜಿ ಶಿಕ್ಷಣ ಸಚಿವ, ಪ್ರಸ್ತುತ ಜೈಲಿನಲ್ಲಿರುವ ಅಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಇವರು ಜೈಲಿನಲ್ಲಿದ್ದುಕೊಂಡೇ ದೇಶದ ಜನರಿಗೆ ಪತ್ರವೊಂದನ್ನು ಬರೆದಿದ್ದು ಇದರಲ್ಲಿ ಈ ವಿಚಾರವನ್ನು ಉಲ್ಲೇಖಿಸಿದ್ದಾರೆ. ಈ ಪತ್ರವನ್ನು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದು, " ಇಂದಿನ ಯುವ ಜನತೆ ಮಹಾತ್ವಾಕಾಂಕ್ಷೆ ಉಳ್ಳವರಾಗಿದ್ದು, ಅವರು ಏನನ್ನಾದರೂ ಸಾಧಿಸಲು ಬಯಸುತ್ತಾರೆ. ಅವರು ಟೆಕ್ನಾಲಜಿ ಮತ್ತು ವಿಜ್ಞಾನದ ಅದ್ಬುತಗಳನ್ನು ಮಾಡಲು ಬಯಸುತ್ತಾರೆ. ಹೀಗಾಗಿ ಕಡಿಮೆ ಶಿಕ್ಷಣ ಪಡೆದ ಪ್ರಧಾನಿಯೊಬ್ಬರಿಗೆ ಇಂದಿನ ಯುವ ಜನತೆಯ ಆಕಾಂಕ್ಷೆಗಳನ್ನು ಪೂರೈಸುವ ಸಾಮರ್ಥ್ಯವಿದೆಯೇ?" ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಸುಮಾರು 60,000 ಶಾಲೆಗಳು ಮುಚ್ಚಿದೆ" ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಹೀಗಾಗಿ ಉನ್ನತ ಶೈಕ್ಷಣಿಕ ಅರ್ಹತೆ ಪಡೆದಿರುವ ಓರ್ವ ಪ್ರಧಾನಿ ದೇಶದ ಅಭಿವೃದ್ದಿಗೆ ಅನಿವಾರ್ಯ ಎಂದು ಸಿಸೋಡಿಯಾ ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಫೆ. 26 ಬಂಧಿಸಿತ್ತು.