ನವದೆಹಲಿ,ಮಾ24(AZM):ವಾಟ್ಸಾಪ್ ನ ಗ್ರೂಪ್ ಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಸೇರಿಸುವ ಮುನ್ನಾ ಆ ವ್ಯಕ್ತಿಯ ಸಮ್ಮತಿ ಪಡೆದುಕೊಳ್ಳದಿದ್ದರೆ ಹಾಗೂ ಪ್ರಚೋದನಕಾರಿ ಮಾಹಿತಿಯ ಮೂಲದ ಕುರಿತು ವಿವರ ಒದಗಿಸದೇ ಇದ್ದರೆ,ಸೋಷಿಯಲ್ ಮೀಡಿಯಾ ಕಂಪನಿಯ ಅಧಿಕಾರಿಗಳಿಗೆ ದಂಡ ವಿಧಿಸುವ ಹಾಗೂ ಜೈಲಿಗೂ ಕಳುಹಿಸುವ ಮಧ್ಯಂತರ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಸಜ್ಜುಗೊಳಿಸಿದೆ.
ಲೋಕಸಭೆ ಚುನಾವಣೆ ಬಳಿಕ ಇವು ಜಾರಿಗೆ ಬರಲಿದ್ದು, ವಾಟ್ಸಾಪ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾ ಆಯಪ್ಗಳೂ ಪಾಲಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾಗಳ ಮೂಲಕ ದೊಂಬಿ, ಹಿಂಸಾಚಾರಕ್ಕೆ ಕಾರಣವಾಗುತ್ತಿರುವ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.. ಈಗಾಗಲೇ ಸಮಾಲೋಚನೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ, ಅಂತಿಮ ನಿಯಮ ರೂಪಿಸುತ್ತಿದೆ.
ಯಾವುದಾದರೂ ಪ್ರಚೋದನಾಕಾರಿ ಸಂದೇಶ ಪಸರಣವಾಗುತ್ತಿದ್ದರೆ ಅಥವಾ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಸೋಷಿಯಲ್ ಮೀಡಿಯಾ ಆಯಪ್ಗಳು ಅದರ ಮೂಲದ ವಿವರವನ್ನು ತನಿಖಾ ಸಂಸ್ಥೆಗಳಿಗೆ ನೀಡಬೇಕು.
ಸಮ್ಮತಿ ಪಡೆಯದೆ ಯಾರನ್ನೂ ಗ್ರೂಪ್ಗೆ ಸೇರ್ಪಡೆಗೊಳಿಸುವ ಅವಕಾಶ ರದ್ದುಗೊಳಿಸುವಂತೆ ಆರು ತಿಂಗಳಿನಿಂದ ವಾಟ್ಸ್ಆಯಪ್ ಸಂಸ್ಥೆಗೆ ಸರ್ಕಾರ ಕೋರಿಕೆ ಇಡುತ್ತಲೇ ಬಂದಿದೆ. ನಿಮ್ಮ ಬಳಿ ಯಾರದ್ದೋ ಮೊಬೈಲ್ ಸಂಖ್ಯೆ ಇದೆ ಎಂಬ ಕಾರಣಕ್ಕೆ, ಅವರ ಒಪ್ಪಿಗೆ ಪಡೆಯದೇ ಗ್ರೂಪ್ಗೆ ಸೇರಿಸಬಾರದು. ಆ ಬಗ್ಗೆ ಮಧ್ಯಂತರ ಮಾರ್ಗಸೂಚಿಯಲ್ಲಿ ಗಮನಹರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.