ಬೆಳಗಾವಿ, ಏ 25 (DaijiworldNews/MS): ಯಾವ ನಿರ್ದಿಷ್ಟ ಪ್ರಕರಣದಲ್ಲಿ 40 ಪರ್ಸೆಂಟ್ ಹಣ ಪಡೆದಿದ್ದೇವೆ ಎಂದು ಸ್ಪಷ್ಟವಾಗಿ ಹೇಳಬೇಕು.ಈ ತರಹ ಗಾಳಿಯಲ್ಲಿ ಗುಂಡು ಹೊಡೆಯುವುದರಿಂದ ಪ್ರಯೋಜನ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ 40 ಪರ್ಸೆಂಟ್ ಕಮಿಷನ್ ತನಿಖೆ ಕೈಗೊಳ್ಳಲಾಗುವುದು ಎಂಬ ಲಕ್ಷ್ಮಣ್ ಸವದಿ ಅವರ ಹೇಳಿಕೆಗೆ ಅವರು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಅವರು ಇಲ್ಲಿ ಇದ್ದಾಗಲೇ ಹೇಳಬಹುದಿತ್ತಲ್ಲ, ಏಕೆ ಸುಮ್ಮನಿದ್ದರು? ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು.
ವರ್ಚಸ್ಸು ಕೆಡಿಸುವ ಪ್ರಯತ್ನ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿ ಗಳನ್ನು ಗುರಿಯಾಗಿಸಿ ಬಿಜೆಪಿ ಇಮೇಜ್ ಕೆಡಿಸಬೇಕು ಅಂತಿದ್ದಾರೆ, ಆದರೆ ಸಾಧ್ಯವಾಗುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಅವರು ಪ್ರಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ನವರು ಭದೊಡ್ಡ ಭ್ರಷ್ಟಾಚಾರಿಗಳು. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾಗಿದೆ. ಹೀಗಿರುವಾಗ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು
ಲಿಂಗಾಯತ ಲಡಾಯಿ ಇಲ್ಲ:
ನಿಮ್ಮ ಹಾಗೂ ಸಿದ್ದರಾಮಯ್ಯ ಮಧ್ಯೆ ಲಿಂಗಾಯತ ಲಡಾಯಿ ಜೋರಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಲಡಾಯಿ ಏನಿಲ್ಲ, ಅವರೇ ಮಾಡಿಕೊಂಡಿರೋದು. ಅವರೇ ಮಾಡಿಕೊಂಡು ಬೇರೆ ಬೇರೆ ಸ್ಪಷ್ಟೀಕರಣ ಕೊಡುತ್ತ ತಿರುಗುತ್ತಿದ್ದಾರೆ. ಗ್ರೌಂಡ್ನಲ್ಲಿ ಲಿಂಗಾಯತರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಜನ ಬಹಳ ಪ್ರಬುದ್ಧವಾಗಿದ್ದಾರೆ, ಯಾರಿಗೆ ಯಾವಾಗ ಹೇಗೆ ಬೆಂಬಲ ಮಾಡಬೇಕೆಂದು ಗೊತ್ತಿದೆ ಎಂದರು.