ಮುಂಬೈ, ಏ 27 (DaijiworldNews/HR): ಮಾದಕ ದ್ರವ್ಯ ಪ್ರಕರಣದಲ್ಲಿ ಯುಎಇಯಲ್ಲಿ ಬಂಧನಕ್ಕೊಳಗಾಗಿ ಏಪ್ರಿಲ್ 1 ರಿಂದ ಶಾರ್ಜಾ ಜೈಲಿನಲ್ಲಿದ್ದ ನಟಿ ಕ್ರಿಸನ್ ಪಿರೇರಾ ಬುಧವಾರ ಸಂಜೆ ಬಿಡುಗಡೆಯಾಗಿದ್ದಾರೆ.
ಪಿರೇರಾ 48 ಗಂಟೆಗಳ ಒಳಗೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಲಕ್ಷ್ಮಿ ಗೌತಮ್ ಹೇಳಿದ್ದಾರೆ.
ಶಾರ್ಜಾ ಜೈಲಿನಿಂದ ಬಿಡುಗಡೆಯಾದ ನಂತರ ವೀಡಿಯೊ ಕರೆಯಲ್ಲಿ ತನ್ನ ತಾಯಿ-ಸಹೋದರನೊಂದಿಗೆ ಮಾತನಾಡಿದ್ದನ್ನು ಆಕೆಯ ಸಹೋದರ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಕರಣದ ವಿವರ:
ಮಾದಕ ದ್ರವ್ಯ ಪ್ರಕರಣದಲ್ಲಿ ಕ್ರಿಸನ್ ಪಿರೇರಾ ಅವರನ್ನು ಸಿಲುಕಿಸಲು ತಂತ್ರ ಹೆಣಿದಿದ್ದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಶ್ವಾನ ಬೊಗಳಿದ್ದಕ್ಕಾಗಿ ಅದರ ಮಾಲಕರ ಬದುಕನ್ನೇ ಹಾಳುಗೆಡವಲು ಯತ್ನಿಸಿದ ಘಟನೆಯಿಂದ ಈ ಪ್ರಕರಣ ಆರಂಭವಾಗುವುದು. ಮುಂಬೈನ ಮಲಾಡ್ ಮತ್ತು ಬೊರಿವಲಿ ಪ್ರದೇಶಗಳಲ್ಲಿ ಆರೋಪಿ ಪೌಲ್ ಬೇಕರಿ ನಡೆಸುತ್ತಿದ್ದು, ನಟಿ ಕ್ರಿಸಾನ್ನ ತಾಯಿ ಪ್ರಮೀಳಾ ಪಿರೇರಾ ವಾಸಿಸುವ ಅದೇ ಕಟ್ಟಡದಲ್ಲಿ ಪೌಲ್ನ ಸಹೋದರಿಯೊಬ್ಬಳು ಉಳಿದುಕೊಂಡಿದ್ದಾಳೆ. 2020 ರಲ್ಲಿ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ, ಪೌಲ್ ತನ್ನ ಸಹೋದರಿಯನ್ನು ನೋಡಲು ಹೋಗಿದ್ದಾಗ ಪ್ರಮೀಳಾ ಅವರ ಸಾಕಿದ್ದ ಶ್ವಾನ ಪೌಲ್ ನನ್ನು ಬೊಗಳಿ, ಕಚ್ಚಲು ಹೋಗಿದೆ. ಅದರಿಂದ ತಪ್ಪಿಸಿಕೊಳ್ಳಲು ಆ್ಯಂಥೋನಿ ನಾಯಿಗೆ ಹೊಡೆಯಲು ಮುಂದಾದಾಗ, ಪ್ರಮೀಳಾ ಆತನನ್ನು ನಿಂದಿಸಿ, ಹಲವರ ಮುಂದೆ ಅವಮಾನಿಸಿದ್ದಾರೆ.
ಇದಕ್ಕೆ ಪ್ರತೀಕಾರವಾಗಿ ಆ್ಯಂಥೋನಿ, ರವಿ ಎಂಬಾತನ ಸಹಾಯ ಪಡೆದು, ಪ್ರಮೀಳಾರನ್ನು ರಿಯಲ್ ಎಸ್ಟೇಟ್ ವಿಚಾರವಾಗಿ ಪರಿಚಯಿಸಿಕೊಂಡು, ಮಗಳ ಮಾಹಿತಿ ಪಡೆದಿದ್ದಾರೆ. ಆಕೆ ನಟಿ ಎಂದು ತಿಳಿದ ಬಳಿಕ ಮಾಡೆಲಿಂಗ್ ಕಾರ್ಯಕ್ರಮವೊಂದರಲ್ಲಿ ಅವಕಾಶವಿರುವುದಾಗಿ ತಿಳಿಸಿ ದುಬಾೖಗೆ ತೆರಳಿ ಶಾರ್ಜಾಗೆ ತೆರಳಲು ಸೂಚಿಸಿದ್ದ, ಹೊರಡುವಾಗ ಆಕೆಗೆ, ರವಿ ಡ್ರಗ್ಸ್ ಇರುವ ಟ್ರೋಫಿಯನ್ನು ಕೊಟ್ಟುಆಡಿಷನ್ಗೆ ಇದು ಅಗತ್ಯವಿದೆ ಎಂದು ಹೇಳಿದ್ದ. ಇದ್ಯಾವುದರ ಬಗ್ಗೆಯೂ ಅರಿವೇ ಇಲ್ಲದ ನಟಿ ಶಾರ್ಜಾದಲ್ಲಿ ಟ್ರೋಫಿ ತಪಾಸಣೆ ವೇಳೆ ಡ್ರಗ್ಸ್ ಪತ್ತೆಯಾದ ಕಾರಣ ಸಿಕ್ಕಿಬಿದ್ದು, ಜೈಲು ಸೇರುವಂತೆ ಆಗಿದೆ.
ತನಿಖೆಯಲ್ಲಿ ಸಿಕ್ಕಿಬಿದ್ದ ಭೂಪ: ನಟಿ ಬಂಧನದ ಬಳಿಕ ಪ್ರಮೀಳಾರ ಮನವಿ ಮೇರೆಗೆ ಮುಂಬಯಿ ಪೊಲೀಸರು ಪ್ರಕರಣ ತನಿಖೆ ನಡೆಸಿದ್ದಾರೆ. ಈ ವೇಳೆ ವಿಚಾರ ಬಹಿರಂಗಗೊಂಡಿದೆ. ಈಗ ಆ್ಯಂಥೋನಿ ಹಾಗೂ ರವಿಯನ್ನು ಪೊಲೀಸರು ಬಂಧಿಸಿದ್ದು, ಶಾರ್ಜಾ ಪೊಲೀಸರಿಗೂ ಪ್ರಕರಣದ ತನಿಖೆಯ ಮಾಹಿತಿ ನೀಡಿದ್ದಾರೆ.
ನಟಿ ಕ್ರಿಸನ್ ಮುಂಬರುವ "ಸಡಕ್ 2", "ಬಾಟ್ಲಾ ಹೌಸ್", ವೆಬ್ ಸರಣಿ "ಥಿಂಕಿಸ್ತಾನ್" ಸೇರಿದಂತೆ ಹಲವಾರು ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ