ಮುಂಬೈ, ಏ 28 (DaijiworldNews/HR): ಮಾಡೆಲ್, ನಟಿ ಜಿಯಾ ಖಾನ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಶುಕ್ರವಾರ ಜಿಯಾ ಅವರ ಗೆಳೆಯ ಹಾಗೂ ಸಿನೆಮಾ ನಟ ಸೂರಜ್ ಪಾಂಚೋಲಿಯನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.
25 ವರ್ಷದ ಜಿಯಾ ಖಾನ್ ಜೂನ್ 3, 2013 ರಂದು ಮುಂಬೈನ ಜುಹುನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇನ್ನು ಜಿಯಾ ಖಾನ್ ಅವರು ಸೂರಜ್ರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಆತ್ಮಹತ್ಯೆಗೂ ಮುನ್ನ ಜಿಯಾ ಅವರು ಬರೆದಿದ್ದ ಪತ್ರ ಪೊಲೀಸರಿಗೆ ದೊರೆತಿತ್ತು. ಈ ಪತ್ರದಲ್ಲಿ ಸೂರಜ್ ಅವರೊಂದಿಗೆ ಜಿಯಾ ಅವರು ಹೊಂದಿದ್ದ ಸಂಬಂಧ, ಸೂರಜ್ ಆಕೆಗೆ ನೀಡಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆಯ ಕುರಿತು ಬರೆದುಕೊಂಡಿದ್ದರು.
ಪತ್ರದ ಆಧಾರದ ಮೇಲೆ ಆ ನಂತರ ಪೊಲೀಸರು ಸೂರಜ್ ಪಾಂಚೋಲಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದ್ದರು.
ವಿಶೇಷ ಸಿಬಿಐ ನ್ಯಾಯಾಧೀಶ ಎಎಸ್ ಸಯ್ಯದ್ ಅವರು, ಸಾಕ್ಷ್ಯಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.