ಬೆಂಗಳೂರು, ಏ 28 (DaijiworldNews/MS):ಶಿವಮೊಗ್ಗದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರದ ವೇಳೆ ತಮಿಳುನಾಡು ರಾಜ್ಯ ಗೀತೆ ಅರ್ಧಕ್ಕೆ ಮೊಟುಕು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಡಿಎಂಕೆ ಸಂಸದೆ ಕನಿಮೊಳಿ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಕನಿಮೋಳಿ, 'ತಮ್ಮದೇ ಪಕ್ಷದ ಸದಸ್ಯರು 'ತಮಿಳು ಥಾಯ್ ವಜ್ತು' ಅನ್ನು ಕೀಳಾಗಿ ಕಾಣುವುದನ್ನು ತಡೆಯಲು ಸಾಧ್ಯವಾಗದ ವ್ಯಕ್ತಿ ತಮಿಳುನಾಡಿನ ಜನರ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ?' ಎಂದಿದ್ದಾರೆ.
ಶಿವಮೊಗ್ಗದಲ್ಲಿ ಗುರುವಾರ ಪ್ರಚಾರದ ವೇಳೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಮಲೈ ಅವರು ಇದ್ದರು. ಈ ವೇಳೆ ಸಮಾರಂಭದಲ್ಲಿ ತಮಿಳುನಾಡು ರಾಜ್ಯ ಗೀತೆಯನ್ನು ಧ್ವನಿವರ್ಧಕದಲ್ಲಿ ಹಾಕಲಾಯಿತು. ಆದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಗೀತೆ ಅರ್ಧಕ್ಕೆ ನಿಲ್ಲಿಸುವಂತೆ ತಿಳಿಸಿದ್ದರು.
ಈ ಘಟನೆಯ ಕುರಿತು ಅಣ್ಣಮಲೈ ಟ್ವೀಟ್ನಲ್ಲಿಪ್ರತಿಕ್ರಿಯಿಸಿದ್ದು, ಅಂದಿನ ವಿರೋಧ ಪಕ್ಷದ ನಾಯಕ ಮತ್ತು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಹಳೆಯ ನ್ಯೂಸ್ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ವರದಿಯಾಗಿದೆ. ತಮಿಳು ಥಾಯ್ ರಾಜ್ಯಗೀತೆಯಿಂದ "ಕನ್ನಡಮುಂಗ್ ಕಲಿತೆಲುಂಗುಂ ಕವಿನ್ಮಲಯಾಳಮುಂ ತುಳುವುಂ" ಎಂಬ ಸಾಲನ್ನು ತೆಗೆದು ರಾಜ್ಯ ವಿಭಜನೆಯನ್ನು ಬಿತ್ತಿದ ಇತಿಹಾಸ ನಿಮ್ಮದಲ್ಲವೇ? ಎಂದು ಅಣ್ಣಾಮಲೈ ಟ್ವೀಟ್ನಲ್ಲಿ ಹೇಳಿದ್ದಾರೆ.