ಘಾಜಿಪುರ, ಏ 30 (DaijiworldNews/HR): ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ರನ್ನು 2005ರಲ್ಲಿ ಅಪಹರಿಸಿ ಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಘಾಜಿಪುರ ಕ್ಷೇತ್ರದ ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನೂ ವಿಧಿಸಿ ಸಂಸದ-ಶಾಸಕ ನ್ಯಾಯಾಲಯ ತೀರ್ಪು ನೀಡಿದ್ದು, ನ್ಯಾಯಾಲಯದ ತೀರ್ಪಿನಿಂದಾಗಿ ಸಂಸದನಾಗಿರುವ ಅಫ್ಜಲ್ ಅನ್ಸಾರಿ ಲೋಕಸಭೆಯ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ.
ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ ಸಹೋದರ ದರೋಡೆಕೋರ- ರಾಜಕಾರಣಿ ಮುಖ್ತಾರ್ ಅನ್ಸಾರಿ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದು,10 ವರ್ಷ ಜೈಲು ಶಿಕ್ಷೆ ವಿಧಿಸಿ 5 ಲಕ್ಷ ರೂ ದಂಡ ವಿಧಿಸಿದೆ.
ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ, ಮುಖ್ತಾರ್ ಅನ್ಸಾರಿ ಮತ್ತು ಸೋದರ ಮಾವ ಎಜಾಜುಲ್ ಹಕ್ ವಿರುದ್ಧ 2007 ರಲ್ಲಿ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಎಜಾಜುಲ್ ಹಕ್ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 1 ರಂದು ಪೂರ್ಣಗೊಳಿಸಲಾಗಿತ್ತು. ಈ ಮೊದಲು ಈ ಪ್ರಕರಣದ ತೀರ್ಪು ಎ 15 ರಂದು ಬರಬೇಕಿತ್ತು, ಆದರೆ ನಂತರ ದಿನಾಂಕವನ್ನು 29 ಕ್ಕೆ ವಿಸ್ತರಿಸಲಾಗಿತ್ತು.