ಮಂಡ್ಯ, ಮಾ26(SS): ಅಂದು ಅಭಿಮನ್ಯು ಜೊತೆ ಅವರ ಅಪ್ಪ ಅರ್ಜುನ ಇದ್ದಿದ್ದರೆ ಚಕ್ರವ್ಯೂಹ ಭೇದಿಸುತ್ತಿದ್ದ. ಆದರೆ ನಾನು ಇಂದು ನಿಖಿಲ್ ಜೊತೆ ಇದ್ದೇನೆ. ಅವನು ಮಂಡ್ಯದ ರಾಜಕೀಯ ಚಕ್ರವ್ಯೂಹ ಭೇದಿಸಲು ನಾನು ಅರ್ಜುನ ಪಾತ್ರಧಾರಿಯಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಿಖಿಲ್ಗೆ ನೀಡುವ ಮತ ಮಂಡ್ಯದ ಅಭಿವೃದ್ಧಿಗೆ ನೀಡುವ ಮತ. ಯಾವುದೇ ಉದ್ದೇಶಗಳೇ ಇಲ್ಲದೆ ರಾಜಕೀಯ ಪ್ರವೇಶ ಮಾಡಿದವರನ್ನು ನಂಬಬೇಡಿ. ಅಭಿವೃದ್ಧಿಗಾಗಿ ಜೀವ ತೇಯುತ್ತಿರುವವರನ್ನು ಬೆಂಬಲಿಸಿ. ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್, ಮಂಡ್ಯದ ಚಕ್ರವ್ಯೂಹವನ್ನು ಭೇದಿಸಲಾರ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಂದು ಚಕ್ರವ್ಯೂಹ ಭೇದಿಸಲು ಹೊರಟ ಅಭಿಮನ್ಯು ಜೊತೆ ಅವರಪ್ಪ ಇರಲಿಲ್ಲ. ಇಂದು ಈ ಅಭಿಮನ್ಯು ಜೊತೆ ಅಪ್ಪ ಆದ ನಾನು ಇದ್ದೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖಂಡರು ನಾನು ಮಂಡ್ಯ ಅಭಿವೃದ್ಧಿಗೆ ನೀಡಿದ ಕಾರ್ಯಕ್ರಮಗಳನ್ನು ಟೀಕಿಸಿದ್ದಾರೆ. ಆದರೆ ನಾನು ಮಂಡ್ಯಕ್ಕೆ ಒಟ್ಟು 8750 ಕೋಟಿ ಅನುದಾನವನ್ನು ಈಗಾಗಲೇ ನೀಡಿದ್ದೇನೆ. ಮಂಡ್ಯದ ಬಜೆಟ್, ಮಂಡ್ಯದ ಮುಖ್ಯಮಂತ್ರಿ ಎಂದು ವ್ಯಂಗ್ಯ ಮಾಡಿದ್ದಾರೆ. ಅಂತಹವರ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ನಿಖಿಲ್ ಎಂಬ ಸಸಿಯನ್ನು ಮಂಡ್ಯದ ಅಂಗಳಕ್ಕೆ ಹಾಕಿದ್ದೇನೆ. ಅದು ಬೆರೆದು ಬಡವರಿಗೆ ನೆರಳು ನೀಡಲಿದೆ. ಅದನ್ನು ಮರವಾಗಿ ಬೆಳೆಸುವ ಜವಾಬ್ದಾರಿ ನಿಮ್ಮದು. ಮಂಡ್ಯ ಜನರು ಜೆಡಿಎಸ್ ಮೇಲೆ ಪ್ರೀತಿಯಿಂದ ಎಂಟು ಕ್ಷೇತ್ರದಲ್ಲಿ ಗೆಲ್ಲಿಸಿದ್ದಾರೆ. ಅವರ ಮೇಲಿರುವ ಗೌರವದಿಂದಲೇ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯಕ್ಕೆ ಅಭ್ಯರ್ಥಿ ಮಾಡಿದ್ದೇನೆ ಎಂದು ತಿಳಿಸಿದರು.