ಕಲಬುರ್ಗಿ,ಮೇ1(DaijiworldNews/KK): ದೇಶದ ಪ್ರಧಾನಿ ನರೇಂದ್ರ ಮೋದಿ ‘ನಾಲಾಯಕ್’ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಅದು ವಿವಾದದ ರೂಪ ಪಡೆಯುತ್ತಿದ್ದಂತೆಯೇ ನಾನು ಹಾಗೆ ಹೇಳಿಕೆ ನೀಡಿಲ್ಲ ಎನ್ನುವ ಮೂಲಕ ಪ್ರಿಯಾಂಕ್ ಖರ್ಗೆ ಯೂ ಟರ್ನ್ ಹೊಡೆದಿದ್ದಾರೆ.
ನಾನು, "ನಾಲಾಯಕ್ ಮಗ" ಇದ್ದರೆ ಮನೆ ನಡೆಸಲು ಆಗುತ್ತಾ ಎಂದು ಪ್ರಶ್ನೆ ಮಾಡಿದ್ದು, ಇಲ್ಲಿ ಯಾರನ್ನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದು ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷ ಸರ್ಪ’ ಎಂದು ಹೇಳಿದ್ದರು, ಇದೀಗ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಪ್ರದಾನಿ ಮೋದಿಯನ್ನು ‘ನಾಲಾಯಕ್’ ಎಂದು ಹೇಳಿ ಬಳಿಕ ತಂದೆಯ ರೀತಿಯಲ್ಲೆ ಹೇಳಿಕೆ ಯನ್ನು ಅಲ್ಲಗಳೆದಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಿಯಾಂಕ್, ಎರಡು ತಿಂಗಳ ಹಿಂದೆ ಮೋದಿ ಮಳಖೇಡಕ್ಕೆ ಬಂದಾಗ ಬಂಜಾರಾ ಸಮಾಜದ ಜನರನ್ನು ಉದ್ದೇಶಿಸಿ ತಮ್ಮ ಮಗ ದೆಹಲಿಯಲ್ಲಿದ್ದಾನೆ ಎಂದು ಹೇಳಿಕೆ ನೀಡಿರುವುದು ನೆನಪಿಸಿಕೊಳ್ಳಿ. ಯಾಕೆಂದರೆ ದೇಶ ನಡೆಸೋನು ಮಾತ್ರವಲ್ಲ.. ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಈ ಹೇಳಿಕೆ ವಿವಾದದರೂಪ ಪಡೆಯುತ್ತಿದ್ದಂತೆಯೇ ಪ್ರಿಯಾಂಕ ಖರ್ಗೆ ‘ನಾನು ಯಾರಿಗೂ ನಾಲಾಯಕ್ ಅಂದಿಲ್ಲ, ನಾಲಾಯಕ್ ಮಗ ಇದ್ರೆ ಮನೆ ಹೇಗೆ ನಡೆಯುತ್ತೆ ಅಂತಾ ಹೇಳ್ತಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.