ಮೈಸೂರು,ಮೇ3(Daijiworld News/KH):ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ಬ್ಯಾನ್ ವಿಚಾರ ‘ಶಿವನ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿವರ್ತನೆ ಮಾಡಿದ ಡಿಕೆ ಶಿವಕುಮಾರ್ ಹಾಗೂ ಹನುಮಂತನ ಜನ್ಮ ದಿನವನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯರಿಂದ ಬೇರೇನೂ ನಿರೀಕ್ಷೆ ಸಾಧ್ಯವೆಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸಿಗರ ನವರಂಗಿ ಆಟ ಜನರಿಗೆ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರಕಾರ ರಚನೆ ಆಗುತ್ತದೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನವರಂಗಿ ಆಟ ಆಡುತ್ತಿದ್ದಾರೆ. ಸೀತೆ ಹುಡುಕಿಕೊಂಡು ಹೋದ ಭಜರಂಗಿ, ರಾಮನಿಗಾಗಿ ಪರ್ವತವನ್ನೆ ಎತ್ತಿ ಕೊಂಡು ಬಂದ. ಕರ್ನಾಟಕದ ಭಜರಂಗಿಗಳು ಹಿಂದೂತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊಸಕಿ ಹಾಕುತ್ತಾರೆ. ಕಾಂಗ್ರೆಸ್ನವರು ಎಚ್ಚರಿಕೆಯಿಂದ ಮಾತನಾಡಿ ಎಂದರು.
ರಾಮ ಹಾಗೂ ಹನುಮಂತನ ಮೇಲೆ ಯಾಕೆ ಕಾಂಗ್ರೆಸಿಗರಿಗೆ ಕೋಪ?, ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರಕಾರ ರಚನೆ ಆಗಲ್ಲ. ಬದಲಾಗಿ ತಾಲಿಬಾನ್ ಸರಕಾರ ರಚನೆ ಆಗುತ್ತದೆ. ಅಕ್ರಮವಾಗಿ ಮುಸ್ಲಿಂರಿಗೆ ಮೀಸಲಾತಿ ಕೊಡಲಾಗುತ್ತಿತ್ತು. ಅದನ್ನ ನಾವು ತೆಗೆದಿದ್ದೇವೆ. ಕಾಂಗ್ರೆಸಿಗರು ಐತಿಹಾಸಿಕ ಅನ್ಯಾಯ ಮಾಡಿದ್ದರು ನಾವು ನ್ಯಾಯ ನೀಡಿದ್ದೇವೆ. ಭಜರಂಗದಳದವರು ಯಾವ ಅಪಹರಣ ಮಾಡಿದ್ದಾರೆ? ಯಾರನ್ನು ಕೊಲೆ ಮಾಡಿದ್ದಾರೆ? ಅಶಾಂತಿ ಕದಡುವ ಕೆಲಸವೇನಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.