ಬೆಂಗಳೂರು, ಮಾ26(SS): ಕಾಂಗ್ರೆಸ್ಗೆ ಪಾಕಿಸ್ತಾನದ ಮೇಲೆ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಹೆಸರನ್ನು ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್ ಅಂತಾ ಹೆಸರು ಬದಲಾಯಿಸಿಕೊಳ್ಳಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಾಕಿಸ್ತಾನ ಪ್ರೀತಿ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರನ್ನು ಪುಕ್ಕಟೆ ಖರ್ಚಿನಲ್ಲಿ ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಬೇಕಾದರೆ ಮಾಡುತ್ತಾರೆ. ಕಾಂಗ್ರೆಸಿಗರು ಭವಿಷ್ಯ ಅರಸಿಕೊಂಡು ಪಾಕಿಸ್ತಾನಕ್ಕೆ ಹೋಗಲಿ. ಅವರಿಗೆ ಅಲ್ಲಿಯೇ ಹೆಚ್ಚು ಅಭಿಮಾನಿ ಹಾಗೂ ಹಿತೈಷಿಗಳಿದ್ದಾರೆ ಎಂದು ತಿಳಿಸಿದ್ದಾರೆ.
2004ರಲ್ಲಿ ರಾಹುಲ್ ಗಾಂಧಿಯವರ ಆಸ್ತಿ 54 ಲಕ್ಷ ರೂ. ಇದ್ದಿದ್ದು ಈಗ 600 ಪಟ್ಟು ಹೆಚ್ಚಿದೆ. ಇದು ಹೇಗೆ ಸಾಧ್ಯ ? ಈ ಕಾರಣಕ್ಕಾಗಿ ರಾಹುಲ್ ಗಾಂಧಿಯನ್ನು ಚೋರಗುರು ಎಂದು ಕರೆಯಬೇಕಾಗುತ್ತದೆ. ಇನ್ನು ಅವರ ಶಿಷ್ಯರ ಆದಾಯ 78 ಕೋಟಿ ರೂ. ಇದ್ದದ್ದು ಈಗ 845 ಕೋಟಿ ರೂ.ಗೆ ಹೆಚ್ಚಿದೆ. ಇವರೆಲ್ಲರೂ ಮಹಾಚೋರ ಶಿಷ್ಯರು. ಇವರೆಲ್ಲ ಸೇರಿ ದೇಶದ ಚೌಕಿದಾರನನ್ನು ಚೋರ ಎಂದು ಕರೆಯುತ್ತಿದ್ದಾರೆ. ಇಂದಿನಿಂದ ಬಿಜೆಪಿ ರಾಹುಲ್ ಗಾಂಧಿಯವರನ್ನು ಚೋರಗುರು ಎನ್ನಬೇಕಾಗುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.