ಮೀರತ್, ಮಾ 26(MSP): ತೀವ್ರ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ , ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಯ ಮೇಲೆ ಆಸ್ಪತ್ರೆಯ ಮೂವರು ಕಾಮಾಂಧ ಸಿಬ್ಬಂದಿಗಳೇ ಅತ್ಯಾಚಾರ ನಡೆಸಿದ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ಬೆಳಕಿಗೆ ಬಂದಿದೆ.
ಉಸಿರಾಟದ ತೊಂದರೆ ಮತ್ತು ಲಿವರ್ ಸೋಂಕುನಿಂದ ಬಳಲುತ್ತಿದ್ದ ಮಹಿಳೆಯನ್ನು ಆಕೆಯ ಪತಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಗೆ ಕಾಮುಕ ಸಿಬ್ಬಂದಿಗಳು ಮತ್ತಿನ ಇಂಜೆಕ್ಷನ್ ನೀಡಿದ್ದು, ಆಕೆ ಮಂಪರಿಗೆ ಜಾರುತ್ತಿದ್ದಂತೆ ಪೈಶಾಚಿಕರು ಈ ಕೃತ್ಯ ಎಸಗಿದ್ದಾರೆ. ಪ್ರಜ್ಞೆ ಮರಳಿದ ಬಳಿಕ ಮಹಿಳೆ ತನ್ನ ಪತಿಗೆ ಈ ವಿಚಾರ ತಿಳಿಸಿದ್ದು, ಆಕೆ ನೀಡಿದ ಮಾಹಿತಿಯಂತೆ ಪತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿರುವ ಸಂತ್ರಸ್ಥ ಮಹಿಳೆಯೂ, ಭಾಗಪತ್ ಮೂಲದವಳಾದ ನಾನು ಮೀರತ್ ನಲ್ಲಿ ಪತಿಯೊಂದಿಗೆ ವಾಸವಾಗಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿದ್ದ ನನ್ನನ್ನು ನನ್ನ ಪತಿಯೂ ಆಸ್ಪತ್ರೆಗೆ ದಾಖಲಿಸಿದ್ದರು, ಬಳಿಕ ನನ್ನನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಅಲ್ಲಿದ್ದ ಮೂವರು ಸಿಬ್ಬಂದಿಗಳು ನನಗೆ ಮಂಪರಿನ ಇಂಜೆಕ್ಷನ್ ನೀಡಿ ಗ್ಯಾಂಗ್ ರೇಪ್ ಮಾಡಿದ್ದಾರೆ. ನನಗೆ ಪ್ರಜ್ಞೆ ಮರಳಿದ ಬಳಿಕ ನನ್ನ ಪತಿಗೆ ಈ ವಿಚಾರ ತಿಳಿಸಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿ ಮಾಹಿತಿ ನೀಡಿದ್ದಾರೆ.