ಬೆಂಗಳೂರು, ಮೇ 08 (DaijiworldNews/MS): ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಬಹಿರಂಗ ಅಖಾಡದ ಅವಧಿ ಅಂತ್ಯವಾಗುತ್ತಿದ್ದಂತೆ ಮತದಾನಕ್ಕೆ ಉಳಿದ ಸಮಯವನ್ನು ಶೂನ್ಯ ಅವಧಿ ಎಂದು ಚುನಾವಣಾ ಆಯೋಗವು ಪರಿಗಣಿಸುತ್ತದೆ. ಈ ಅವಧಿಯಲ್ಲಿ ಇನ್ನೇನಿದ್ದರು ಮನೆ ಬಾಗಿಲಿಗೆ ಬಂದು ಮತಯಾಚನೆ ಮಾತ್ರ ಉಳಿದಿದೆ.
ಇಂದು ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಸಮಾವೇಶ, ರೋಡ್ ಶೋ, ಉತ್ಸವ, ರ್ಯಾಲಿ ಮತ್ತು ಧ್ವನಿ ವರ್ಧಕಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ. ಮತದಾನ ಮೇ ೧೦ ರಂದು ನಡೆಯಲಿದ್ದು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಅದಕ್ಕಿಂತ ೪೮ ತಾಸು ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಳ್ಳಬೇಕು .
ಬಹಿರಂಗ ಪ್ರಚಾರ ಮುಗಿಸಿದ ಬಳಿಕ ಸ್ಟಾರ್ ಪ್ರಚಾರಕರು, ಮುಖಂಡರು ಕ್ಷೇತ್ರ ತೊರೆಯಬೇಕು. ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.