ಕಲಬುರಗಿ, ಮೇ 08 (DaijiworldNews/SM): ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಬಹಿರಂಗ ಪ್ರಚಾರಕ್ಕೆ ಇಂದು ಸೋಮವಾರ ತೆರೆದಿದ್ದಿದೆ. ಈ ಹೊತ್ತಿನಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಕರ್ನಾಟಕದ ‘ಭೂಮಿ ಪುತ್ರ’ ನಾಗಿ ಇಲ್ಲಿ ಜನ್ಮ ಪಡೆದಿದ್ದು ನನ್ನ ಸೌಭಾಗ್ಯ ಎಂದರು. ಇತ್ತೀಚೆಗೆ ಬಿಜೆಪಿ ಅಭ್ಯರ್ಥಿಯೊಬ್ಬರು ಖರ್ಗೆ ಮತ್ತು ಅವರ ಕುಟುಂಬದವರನ್ನು ಮುಗಿಸಬೇಕೆಂದು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದರೆನ್ನಲಾದ ಆಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ಖರ್ಗೆ, ಯಾರಾದರೂ ನನ್ನನ್ನು ಮುಗಿಸಲು ಬಯಸಿದರೆ, ಹಾಗೆ ಮಾಡಬಹುದು. ಆದರೆ ನನ್ನ ಕೊನೆಯ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ, ಅವರ ಹಿತಾಸಕ್ತಿಗಳನ್ನು ಕಾಪಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರು ಖರ್ಗೆ, ಅವರ ಪತ್ನಿ ಮತ್ತು ಮಕ್ಕಳನ್ನು ಮುಗಿಸಿಹಾಕುವುದಾಗಿ ಕನ್ನಡದಲ್ಲಿ ಹೇಳಿರುವ ಆಡಿಯೋ ರೆಕಾರ್ಡಿಂಗ್ ನ್ನು ಕಾಂಗ್ರೆಸ್ ಹಂಚಿಕೊಂಡಿದೆ.