ಬೆಂಗಳೂರು, ಮೇ 09 (DaijiworldNews/MS): ರಾಜ್ಯದಲ್ಲಿ ಈ ಬಾರಿ ಮಹಿಳೆಯರು, ಯುವಕರು, ವಿಕಲಚೇತನರನ್ನು ಮತದಾನಕ್ಕೆ ಪ್ರೋತ್ಸಾಹಿಸಲು ಅವರಿಂದಲೇ ನಿರ್ವಹಿಸಲ್ಪಡುವ ಒಟ್ಟು 2258 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಈ ಪೈಕಿ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ 996 ಸಖೀ ಮತಗಟ್ಟೆ, ವಿಕಲಚೇತನರಿಂದ ನಿರ್ವಹಿಸಲ್ಪಡುವ 239 ಮತ್ತು ಯುವಕರಿಂದ ನಿರ್ವಹಣೆಯಾಗುವ 286 ಮಾದರಿ ಮತಗಟ್ಟೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಕಲೆ ಹಾಗೂ ಸಂಸ್ಕೃತಿ ಬಿಂಬಿಸುವ 144 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ ಕೂಡ ಮಾಡಲಾಗಿದೆ.
ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಗಾ ವಹಿಸಲು ಸೂಕ್ಷ್ಮ ವೀಕ್ಷಕರನ್ನು ನೇಮಿಸಿದ್ದು, ವೆಬ್ ಕಾಸ್ಟಿಂಗ್, ಸಿಸಿಟಿವಿ ಸೇರಿದಂತೆ ವಿವಿಧ ರಕ್ಷಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಆಯೋಗವೇ ಶೇ.95ರಷ್ಟು ಒಟ್ಟು 4,92,85,247 ಮಂದಿ ಮತದಾರರಿಗೆ ಭಾವಚಿತ್ರವಿರುವ ಮತದಾರರ ಚೀಟಿಗಳನ್ನು ವಿತರಿಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.