ಸೂರತ್ ಘಡ,ಮಾ26(AZM):ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಭಾರತವನ್ನು ಬಡತನ ಮುಕ್ತ ರಾಷ್ಟ್ರವನ್ನಾಗಿಸುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಭರವಸೆ ನೀಡಿದ್ದಾರೆ.
ಇಂದು ಸೂರತ್ ಘಡದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಈ ಕುರಿತು ಅವರು ಮಾತನಾಡಿದರು.ಬಡತನವನ್ನು ಹೇಗೆ ನಿರ್ಮೂಲನೆಗೊಳಿಸಬೇಕು ಎಂಬುದರ ಬಗ್ಗೆ ಕಳೆದ ಆರು ತಿಂಗಳಿನಿಂದ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿದ್ದು, ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು ಎಂದು ರಾಹುಲ್ ಗಾಂಧಿಯವರು ಹೇಳಿದರು.
ಕೇವಲ ಶ್ರೀಮಂತರು ಮಾತ್ರ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ಅಭಿವೃದ್ದಿಯಾಗುತ್ತಿದ್ದಾರೆ. ಈ ಹಿನ್ನಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ, 20 ರಷ್ಟು ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕಪ್ಪು ಹಣ ಹೊಂದಿರುವವರಿಗೆ ನೆರವು ನೀಡುತ್ತಿರುವ ಮೋದಿಯವರು ಶ್ರೀಮಂತರಿಗೆ ಹಣ ಕೊಡುತ್ತಿದ್ದರೆ, ಕಾಂಗ್ರೆಸ್ ಬಡವರಿಗೆ ಹಣ ನೀಡಲಿದೆ ಎಂದು ಹೇಳಿದರು. ಬಡತನದಲ್ಲಿದ್ದ 16 ಕೋಟಿ ಜನರನ್ನು ಯುಪಿಎ ಸರಕಾರದ ಸಮಯದಲ್ಲಿ ಮೇಲಕತ್ತೆಲಾಗಿದ್ದು, ಇನ್ನೂ 25 ಕೋಟಿ ಜನರು ಬಡತನದಲ್ಲೇ ತಮ್ಮ ಜೀವನ ಸಾಗಿಸುತ್ತಿರುವುದು ನಾಚಿಕೆಗೇಡು ಎಂದು ಮೋದಿ ಸರಕಾರದ ವಿರುದ್ಧ ರಾಹುಲ್ ಗಾಂಧಿಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.