ಬೆಂಗಳೂರು, ಮೇ 09 (DaijiworldNews/MS): ರಾಜ್ಯ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾನಕ್ಕೆ ಕೇವಲ 1 ದಿನ ಮಾತ್ರ ಬಾಕಿ ಇದೆ. ಶಾಂತಿಯುತ, ನಿರ್ಭೀತ ಹಾಗೂ ನ್ಯಾಯಯುತ ಮತದಾನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾಳೆ ಮೇ 10 ಮತದಾನ ನಡೆಯಲಿರುವ ಹಿನ್ನೆಲೆ ರಾಜ್ಯದೆಲ್ಲೆಡೆ 1 ಲಕ್ಷದ 56 ಸಾವಿರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಅಭೂತಪೂರ್ವ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇಲ್ಲಿನ ಪೊಲೀಸ್ ಸಿಬ್ಬಂದಿಯ ಜೊತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪೆನಿಗಳನ್ನು ನಿಯೋಜಿಸಲಾಗಿದೆ. ಮತದಾನಕ್ಕೆ ಸೂಕ್ತ ಭದ್ರತೆ ಕಲ್ಪಿಸುವ ಸಲುವಾಗಿ ಚುನಾವಣಾ ಕರ್ತವ್ಯಕ್ಕೆಂದು 304 ಡಿವೈಎಸ್ಪಿಗಳು, 991 ಪಿಐಗಳು, 2,610 ಪಿಎಸ್ಐಗಳು, 5,803 ಎಎಸ್ಐಗಳು, 46,421 ಹೆಚ್ಸಿ/ಪಿಸಿಗಳು, 27,990 ಹೋಮ್ಗಾರ್ಡ್ಗಳು ಸೇರಿದಂತೆ ಒಟ್ಟು 84,119 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿದೆ.
ಅದೇ ರೀತಿ, ಆಯುಕ್ತರ ವ್ಯಾಪ್ತಿ ಹಾಗೂ ಜಿಲ್ಲಾ ಕೇಂದ್ರ ವ್ಯಾಪ್ತಿಯ ಜವಾಬ್ದಾರಿಯನ್ನು ಎಸ್ಪಿಗಳಿಗೆ ನೀಡಲಾಗಿದ್ದು, ಚುನಾವಣಾ ನಿಗಾವಹಿಸಲಿದ್ದಾರೆ.
ಅವಶ್ಯಕತೆಗನುಗುಣವಾಗಿ ಭದ್ರತಾ ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಸುಮಾರು 8,500 ಪೊಲೀಸ್ ಅಧಿಕಾರಿ/ಸಿಬ್ಬಂದಿ, ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕಾಗಿ ಪಡೆಯಲಾಗಿದೆ. 650 ಸಿಎಪಿಎಫ್ ಕಂಪನಿಗಳ ಜೊತೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ಸಹ ನಿಯೋಜಿಸಲಾಗಿದೆ.