ಅಸ್ಸಾಂ, ಮೇ 09 (DaijiworldNews/HR): ಐದು ವರ್ಷದ ದತ್ತು ಮಗಳನ್ನು ಟೆರೇಸಿನ ಮೇಲೆ ಸುಡು ಬಿಸಿಲಿನಲ್ಲಿ ಕಟ್ಟಿ ಹಾಕಿ ಸಿಗರೇಟಿನಿಂದ ಸುಟ್ಟು ಕಿರುಕುಳನೀಡಿದ ವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಅಸ್ಸಾಂನ ಪ್ರಮುಖ ಮನೋವೈದ್ಯ ಡಾ. ಸಂಗೀತಾ ದತ್ತಾ ಮತ್ತು ಅವರ ಪತಿ ಡಾ. ವಲಿಯುಲ್ ಇಸ್ಲಾಂ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣದಲ್ಲಿ ಡಾ. ವಲಿಯುಲ್ ರನ್ನು ಬಂಧಿಸಿದ್ದರೆ ಆತನ ಪತ್ನಿ ತಲೆಮರೆಸಿಕೊಂಡಿದ್ದ ಸಂಗೀತಾ ಅವರನ್ನು ಮೇಘಾಲಯದ ರಿಬೋದಿಂದ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದಂಪತಿಗಳು ಇಬ್ಬರೂ ದತ್ತು ಪಡೆದ ಮಗುವಿಗೆ ಕ್ರೂರವಾಗಿ ಚಿತ್ರಹಿಂಸೆ ನೀಡುತ್ತಿದ್ದು, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಗಳ ಮಧ್ಯಪ್ರವೇಶದಿಂದ ಈ ಘಟನೆ ಬೆಳಕಿಗೆ ಬಂದಿದೆ.
ಟೆರೇಸ್ ಮೇಲಿನ ಕಂಬಕ್ಕೆ ಬಾಲಕಿಯ ಕೈಗಳನ್ನು ಕಟ್ಟಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಲಾಗಿದೆ.
ಇನ್ನು ಮೊದಲಿಗೆ ವೈದ್ಯ ದಂಪತಿ ಬಾಲಕಿ ತಮ್ಮದೇ ಮಗು ಎಂದು ಹೇಳಿದ್ದರೆ. ಆದರೆ ತನಿಖೆಯ ಸಮಯದಲ್ಲಿ ಬಾಲಕಿ ಅವರ ಮಗು ಅಲ್ಲ, ಅವರು ಅವಳನ್ನು ದತ್ತು ಪಡೆದಿದ್ದಾರೆಂದು ಗೊತ್ತಾಗಿದೆ.
ಪಾಲ್ಟನ್ ಬಜಾರ್ ಪೊಲೀಸ್ ಠಾಣೆಯಲ್ಲಿ ವೈದ್ಯ ದಂಪತಿ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳು ಮತ್ತು ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.