ಬೆಂಗಳೂರು, ಮೇ 09 (DaijiworldNews/HR): ಇವಿಎಂನಲ್ಲಿ ದೋಷ ಕಂಡುಬರುವುದಿಲ್ಲ. ಆ ರೀತಿ ಏನಾದ್ರು ದೋಷ ಕಂಡು ಬಂದರೆ ತಕ್ಷಣ ನಾವು ಬದಲಾವಣೆ ಮಾಡುತ್ತೇವೆ ಎಂದು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಾಳೆ ನಡೆಯಲಿರುವ ಚುನಾವಣೆ ಸಿದ್ಧತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಮಂಗಳವಾರ ಸಿಬ್ಬಂದಿ ತೆರಳಲಿದ್ದು, 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್ಗಳಲ್ಲಿ ಇವಿಎಂ ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗೆ ತೆರಳುತ್ತಾರೆ ಎಂದರು.
ಇನ್ನು ಒಂದು ಬಸ್ನಲ್ಲಿ ಐದರಿಂದ ಆರು ಮತಕಟ್ಟೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಡ್ರಾಪ್ ಮಾಡಲಾಗುವುದು. ನಾಳೆ ಬೆಳಗ್ಗೆ ಮತಗಟ್ಟೆಗಳಲ್ಲಿ 6 ಗಂಟೆಗೆ ಅಣಕು ಮತದಾನ ನಡೆಯಲಿದ್ದು, ಏಳು ಗಂಟೆಗೆ ಮತದಾನ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇವಿಎಂನಲ್ಲಿ ದೋಷ ಕಂಡು ಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.