ಬೆಂಗಳೂರು, ಮೇ 10 (DaijiworldNews/SM): ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದೆ. ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದ್ದು, ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮೇ 13ರಂದು ಮತದಾರರು ನೀಡಿದ ತೀರ್ಪು ಬಹಿರಂಗಗೊಳ್ಳಲಿದೆ.
ಈಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ. ಕೆಲವು ಸಮೀಕ್ಷೆಗಳು ಮತ್ತೆ ರಜ್ಯದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದಿದೆ. ಆದರೆ, ಇಲ್ಲಿಯ ತನಕ ಲಭ್ಯವಾಗಿರುವ ಬಹುತೇಕ ಸಮೀಕ್ಷೆಗಳಲ್ಲಿ ಆಡಳಿತರೂಢ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. ಎಂದಿನಂತೆ ಜೆಡಿಎಸ್ ಮೂರನೇ ಸ್ಥಾನದಲ್ಲಿದೆ.
ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ.