ಮಂಡ್ಯ, ಮಾ 26(SM): ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಅವರನ್ನು ಎದುರಿಸಲು ಜೆಡಿಎಸ್-ಕಾಂಗ್ರೆಸ್ ಮಿತ್ರ ಪಕ್ಷಗಳು ಹತ್ತು ಹಲವು ತಂತ್ರಗಳನ್ನು ರೂಪಿಸಿಕೊಂಡಿವೆ.
ಸುಮಲತಾಗೆ ದೊರಕುತ್ತಿರುವ ಬೆಂಬಲವನ್ನು ಕಂಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯಾಗಿದೆ.
ಹೀಗಾಗಿ ತನ್ನ ಮಗನ ಪರವಾಗಿ ಸಿಎಂ ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಲತಾ ಅವರ ಬೆಂಬಲಿಗರನ್ನು ನೋಡಿದ ಬಳಿಕ ಸಿಎಂ ಅವರಲ್ಲಿ ಮತ್ತಷ್ಟು ಭೀತಿ ಹೆಚ್ಚಾಗಿದೆ.
ಮತ್ತೊಂದೆಡೆ ಸುಮಲತಾ ಅಂಬರೀಷ್ ಅವರು ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ತೀವ್ರ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ಪೈಪೋಟಿ ನೀಡಲು ಹೊಸ ತಂತ್ರ ರೂಪಿಸಲಾಗಿದೆ. ಸುಮಲತಾ ಅವರದೇ ಹೆಸರಿನ ಇನ್ನೂ ಮೂವರು ಮಹಿಳೆಯರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಹೆಸರಿನ ನಾಲ್ಕು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.