ಬೆಂಗಳೂರು, ಮೇ 11 (DaijiworldNews/SM): ರಾಜ್ಯದ 224 ಕ್ಷೇತ್ರಗಳಲ್ಲಿ ನಿನ್ನೆ ಶಾಂತಿಯುತವಾಗಿ ಮತದಾನವಾಗಿದೆ. ಇನ್ನು ಮತ ಎಣಿಕೆ ಮತ್ತು ಫಲಿತಾಂಶ ಶನಿವಾರ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕ ದೃಷ್ಟಿಯಿಂದ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮತ ಎಣಿಕೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಮೇ 13ರಂದು ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಶನಿವಾರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು ಐದು ಜನರಿಗಿಂತ ಹೆಚ್ಚು ಜನರು ಗುಂಪು ಸೇರದಂತೆ ಸೂಚನೆ ನೀಡಿದ್ದಾರೆ. ಇನ್ನು ಶವಸಂಸ್ಕಾರ, ಮದುವೆ ಬಿಟ್ಟು ಉಳಿದೆಲ್ಲದಕ್ಕೂ ನಿಷೇಧಾಜ್ಞೆ ಅನ್ವಯವಾಗಲಿದೆ.
ಮೇ 13ರಂದು ಸ್ಫೋಟಕ ವಸ್ತುಗಳ ಸಾಗಾಟ, ಪಟಾಕಿ ಸಿಡಿಸುವುದು, ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಗುವುದು, ಭಿತ್ತಿಪತ್ರ ಪ್ರದರ್ಶನ ಕೂಡ ನಿಷೇಧಿಸಲಾಗಿದೆ.