ಬೆಂಗಳೂರು, ಮೇ 12 (DaijiworldNews/MS):ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇಲ್ಲ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಪಕ್ಷದ ಮೊರೆ ಹೋಗಬೇಕೆಂದು ಬಿಜೆಪಿ, ಕಾಂಗ್ರೆಸ್ ಒಳಗೊಳಗೆ ಕಸರತ್ತು ಶುರು ಮಾಡಿದೆ.
ಸದ್ಯ ನನಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಅಸಮಾಧಾನವಿಲ್ಲ. ನಮ್ಮ ಷರತ್ತುಗಳನ್ನು ಯಾವ ಪಕ್ಷ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರ್ಧರಿಸುತ್ತೇವೆ. ಮೈತ್ರಿಗೆ ನಾವು ಸಿದ್ಧ ಎಂದು ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಂಗಾಪುರಕ್ಕೆ ತೆರಳುವ ಮೊದಲು ಹೆಚ್ಡಿ ಕುಮಾರಸ್ವಾಮಿ ಮಾದ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಈ ಬಾರಿ ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಹೋಗುತ್ತೇನೆ ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಮ್ಮಿಶ್ರ ಪಕ್ಷದ ಪಾಲುದಾರರು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಬುಧವಾರ ಮತದಾನ ನಡೆದ ದಿನದಂದು 10 ಎಕ್ಸಿಟ್ ಪೋಲ್ಗಳು ಹೊರಬಿದ್ದಿದ್ದು ಕಾಂಗ್ರೆಸ್ ಅಧಿಕ ಸೀಟು ಪಡೆದರೂ, ಯಾವುದೇ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ ಎಂದು ಭವಿಷ್ಯ ನುಡಿದಿದೆ. ಹೀಗಾಗಿ ಜೆಡಿಎಸ್ ಪಕ್ಷದ ಸಹಾಯ ಹಸ್ತದತ್ತ ಚಿತ್ತ ನೆಟ್ಟಿದ್ದು ಒಳಗೊಳಗೆ ಕಸರತ್ತು ಶುರುವಾಗಿದೆ.