ನವದೆಹಲಿ, ಮೇ 12 (DaijiworldNews/MS): ಕುಡಿದ ಮತ್ತಿನಲ್ಲಿದ್ದ ಮಹಿಳೆಯೋರ್ವಳು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ನವದೆಹಲಿ-ಕೋಲ್ಕತ್ತಾ ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು ,ನಂತರ ಸಿಐಎಸ್ಎಫ್ ಸಿಬ್ಬಂದಿ ಮಹಿಳೆಯನ್ನು ಕೋಲ್ಕತ್ತಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಮಹಿಳೆಯನ್ನು ಪರಂಜಿತ್ ಕೌರ್ ಎಂದು ಗುರುತಿಸಲಾಗಿದೆ.ನವದೆಹಲಿ-ಕೋಲ್ಕತ್ತಾ ವಿಮಾನದಲ್ಲಿ ಪರಂಜಿತ್ ಕೋಲ್ಕತ್ತಾಗೆ ಹೋಗುತ್ತಿದ್ದು ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬರು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳೆ ಹಾರಾಟಕ್ಕೆ ಅಡ್ಡಿಪಡಿಸುತ್ತಿರುವುದನ್ನು ಅರಿತ ಕ್ಯಾಬಿನ್ ಸಿಬ್ಬಂದಿ ಘಟನೆಯ ಬಗ್ಗೆ ಏರ್ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 1.10ಕ್ಕೆ ಲ್ಯಾಂಡ್ ಆಗುತ್ತಿದ್ದಂತೆ ಏರ್ ಲೈನ್ ಸಿಬ್ಬಂದಿ ಆಕೆಯನ್ನು ಸಿಐಎಸ್ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಗುರುವಾರ ಬೆಳಗಿನ ಜಾವದವರೆಗೆ ಸಿಐಎಸ್ಎಫ್ ಆಕೆಯನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಬಂಧಿಸಿ, ಕೊನೆಗೆ ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬಿಧಾನನಗರ ಸಿಟಿ ಪೊಲೀಸ್ ಅಧೀನದಲ್ಲಿರುವ ಏರ್ಪೋರ್ಟ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ. ಭಾರತೀಯ ಕಾನೂನಿನ ಪ್ರಕಾರ, ಸೂರ್ಯಾಸ್ತದ ನಂತರ ಪೊಲೀಸರು ಮಹಿಳೆಯನ್ನು ಬಂಧಿಸುವಂತಿಲ್ಲ, ಆದ್ದರಿಂದ ಸಿಐಎಸ್ಎಫ್ ಸಿಬ್ಬಂದಿ ಸೂರ್ಯೋದಯದವರೆಗೆ ಕಾಯಬೇಕಾಯಿತು.