ತುಮಕೂರು, ಮೇ 12 (DaijiworldNews/HR): ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರೀತಿಯಲ್ಲಿ ಬಿರುಕು ಉಂಟಾದ ಹಿನ್ನೆಲೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಕತ್ತು ಕುಯ್ದು ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭಟ್ಟರಹಳ್ಳಿಯ ಸಿದ್ದರಾಮಯ್ಯ ಅವರ ಪುತ್ರ ಬಿ.ಎಸ್.ವಿನಯಕುಮಾರ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ.
ಕೆ.ಜೀವಿತಾ (17) ಎಂಬಾಕೆಯನ್ನು ವಿನಯಕುಮಾರ್ ಪ್ರೀತಿಸುತ್ತಿದ್ದು, ಈತ ಸಿದ್ದರಾಮೇಶ್ವರ ದೇಗುಲದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲ ದಿನಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚಿಗೆ ಇಬ್ಬರ ನಡುವೆ ಬಿರುಕು ಉಂಟಾಗಿತ್ತು.
ಇನ್ನು ಬಿರುಕಿನಿಂದಾಗಿ ಕೋಪಗೊಂಡಿದ್ದ ವಿನಯಕುಮಾರ್ ಗುರುವಾರ ಮಂಜಾನೆ 5:30ರ ವೇಳೆಗೆ ಯುವತಿಯ ಮನೆಗೆ ತೆರಳಿ ಮಚ್ಚಿನಿಂದ ಆಕೆಯ ಕುತ್ತಿಗೆಗೆ ಬಲವಾಗಿ ಬೀಸಿದ್ದು, ಹಲ್ಲೆ ನಡೆಸಿದ ಬಳಿಕ ವಿನಯಕುಮಾರ್ ನಾಪತ್ತೆಯಾಗಿದ್ದು, ಆತನಿಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗ್ರಾಮದ ಕಲ್ಯಾಣಿ ಬಳಿ ಆತನ ಟೀ ಶರ್ಟ್ ಪತ್ತೆಯಾಗಿದ್ದರಿಂದ ಅನುಮಾನಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಯಾಣಿಯಲ್ಲಿ ಹುಡುಕಾಟ ನಡೆಸಿದಾಗ ಆತನ ಮೃತದೇಹ ಪತ್ತೆಯಾಗಿದೆ.
ಮಾರಣಾಂತಿಕವಾಗಿ ಗಾಯಗೊಂಡಿರುವ ಆಕೆ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821