ಶ್ರೀನಗರ್, ಮಾ27(SS): ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರು ಶ್ರೀನಗರ್ ನಲ್ಲಿನ ತಮ್ಮ ಸ್ಕ್ವಾಡ್ರನ್ನಲ್ಲೇ ಇದ್ದಾರೆ. ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕು, ಬಳಿಕ 2 ದಿನಗಳ ನಂತರ ಭಾರತಕ್ಕೆ ಹಿಂತಿರುಗಿದ್ದ ಅವರು ನಾಲ್ಕು ವಾರಗಳ ರಜಾ ಇದ್ದರೂ ಶ್ರೀನಗರದಲ್ಲಿನ ಸ್ಕ್ವಾಡ್ರನ್ಗೆ ವಾಪಸಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಿಂಗ್ ಕಮ್ಯಾಂಡರ್ ಅಭಿನಂದನ್ ರಜಾ ಇದ್ದರೂ ಚೆನ್ನೈನಲ್ಲಿರುವ ತಮ್ಮ ಕುಟುಂಬದ ಜತೆಗೆ ಇರಲು ತೆರಳದೆ ಶ್ರೀನಗರದಲ್ಲಿ ಸ್ಕ್ವಾಡ್ರನ್ನಲ್ಲೇ ಇರುವುದಕ್ಕೆ ನಿಶ್ಚಯಿಸಿದ್ದಾರೆ.
ಪಾಕಿಸ್ತಾನದಿಂದ ಭಾರತಕ್ಕೆ ಅಭಿನಂದನ್ ಹಿಂತಿರುಗಿದ ನಂತರ ಎರಡು ವಾರಗಳ ಕಾಲ ಅನುಸರಿಸಬೇಕಾದ ಎಲ್ಲ ನಿಯಮಗಳನ್ನು ಪೂರೈಸಿದ ಮೇಲೆ ಹನ್ನೆರಡು ದಿನ ರಜಾ ಮೇಲೆ ತೆರಳಿದರು. ಅಭಿನಂದನ್ ವರ್ಧಮಾನ ಡಿಬ್ರೀಫಿಂಗ್ ಮುಕ್ತಾಯ ವರ್ತಮಾನ್ ಅವರು ಚೆನ್ನೈನಲ್ಲಿ ತಮ್ಮ ಪೋಷಕರ ಮನೆಗೆ ಕುಟುಂಬದ ಜತೆ ಸಮಯ ಕಳೆಯಲು ತೆರಳಬಹುದಿತ್ತು. ಆದರೆ ಅವರ ಸ್ಕ್ವಾಡ್ರನ್ ಇರುವ ಶ್ರೀನಗರಕ್ಕೆ ತೆರಳಲು ಬಯಸಿದರು ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ಮಂಡಳಿ ನಾಲ್ಕು ವಾರಗಳ ಅನಾರೋಗ್ಯದ ರಜಾ ನಂತರ ಅವರ ಕ್ಷಮತೆಯನ್ನು ಪರಿಶೀಲಿಸಲಿದೆ. ಆ ನಂತರ ಅಭಿನಂದನ್ ಆಸೆಯಂತೆ ಮತ್ತೆ ಯುದ್ಧ ವಿಮಾನ ಚಲಾಯಿಸಬಹುದೇ ಎಂದು ನಿರ್ಧರಿಸಲಿದೆ.
ಪಾಕಿಸ್ತಾನ ಸೇನೆಯು ಅಭಿನಂದನ್ ಅವರನ್ನು ಫೆಬ್ರವರಿ ತಿಂಗಳಲ್ಲಿ ಸೆರೆ ಹಿಡಿದಿತ್ತು. ಪಾಕಿಸ್ತಾನಿ ವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ ನಂತರ ಈ ಘಟನೆ ನಡೆದಿತ್ತು.