ಬೆಂಗಳೂರು, ಮಾ27(SS): ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದಿಂದ ಗೆದ್ದು, ಆ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಬಳಿಕ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚಿಸಲಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡೆವು.ಅಂದಿನಿಂದಲೂ ಒಟ್ಟಾಗಿ ಚುನಾವಣೆ ತಯಾರಿ ನಡೆಸಿದ್ದೇವೆ. ಜೆಡಿಎಸ್ 7 ಹಾಗೂ ಕಾಂಗ್ರೆಸ್ 21ರಲ್ಲಿ ಸ್ಪರ್ಧಿಸುತ್ತಿದ್ದು, ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.
ನರೇಂದ್ರ ಮೋದಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ. ಕೇಂದ್ರಿಕೃತ ವ್ಯವಸ್ಥೆಯ ಪರವಾಗಿದ್ದಾರೆ. ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಪರವಾಗಿ ಇದ್ದಾರೆ. ಅವರು ವಿಕೇಂದ್ರಿಕೃತ ವ್ಯವಸ್ಥೆಯ ಪರವಾಗಿದ್ದಾರೆ. ಹೀಗಾಗಿ ರಾಹುಲ್ ಗೆಲ್ಲುತ್ತಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಯುಪಿಎ ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಆಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ 150 ಹಾಗೂ ಮೈತ್ರಿ ಪಕ್ಷಗಳು 150 ಸ್ಥಾನದಲ್ಲಿ ಜಯಬೇರಿ ಭಾರಿಸಲಿವೆ. ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳು 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ. ಮೈತ್ರಿಯಲ್ಲಿ ಅಸಮಾಧಾನವಿದೆ. ಎರಡು ಮೂರು ಕಡೆಗಳಲ್ಲಿ ಗೊಂದಲಗಳಿರುವುದು ಸತ್ಯ. ಗೊಂದಲ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ. ಸಮಾಧಾನ ಮಾಡುವ ಶಕ್ತಿಯೂ ತಮ್ಮಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಿಗೆ ಯಾವುದೇ ಸಿದ್ಧಾಂತವಿಲ್ಲ, ಅವರು ಮಾತನಾಡುವ ಶೈಲಿಗೆ ತಮ್ಮ ವಿರೋಧವಿದೆ. ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಸುಳ್ಳು ಹೇಳುತ್ತಾರೆ. ಆ ಸುಳ್ಳನ್ನು ನಾವು ಜನರಿಗೆ ಮನವರಿಕೆ ಮಾಡಿಕೊಡಬೇಕು. ಹೀಗಾಗಿಯೇ ಬಿಜೆಪಿಗರ ಸುಳ್ಳನ್ನು ವಿರೋಧಿಸುತ್ತೇನೆ ಎಂದು ತಿಳಿಸಿದರು.
ಈ ಹಿಂದೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದರು. ವ್ಯವಸ್ಥಿತವಾಗಿ ನನ್ನ ವಿರುದ್ಧ ಅಪಪ್ರಚಾರ ತೀವ್ರಗೊಳಿಸಿದರು. ಆದರೂ ನಾನು ಹತಾಶನಾಗಿಲ್ಲ, ಇದನ್ನು ಮತ್ತಷ್ಟು ಸವಾಲಾಗಿ ತೆಗದುಕೊಂಡಿದ್ದೇನೆ. ಹಿಂದುತ್ವ, ದೇಶಭಕ್ತಿ ಕಲ್ಪನೆ ಮುಂದೊಡ್ಡಿ ಹಿಂದುತ್ವ ವಿರೋಧಿ ಎಂದು ಬಿಂಬಿಸಿ ಜನರನ್ನು ದಾರಿ ತಪ್ಪಿಸಿದರು. ಹೀಗಾಗಿ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಯುವಕರನ್ನು ಸಂಘ ಪರಿವಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.