ನವದೆಹಲಿ ಮಾ 27(MSP): ಭಾರತೀಯ ವಿಜ್ಞಾನಿಗಳು , ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ವೊಂದನ್ನು ಹೊಡೆದುರುಳಿಸುವ ಮೂಲಕ, ಅಮೇರಿಕ, ರಷ್ಯಾ ಹಾಗೂ ಚೀನಾವನ್ನೂ ಮೀರಿಸಿದ ಸಾಧನೆಯನ್ನು ಭಾರತ ಮಾಡಿದೆ.
ವಿಶ್ವವೇ ಆಶ್ಚರ್ಯಪಡುವಂತಹ ಸಾಧನೆ ಮಾಡಿದ್ದು, ಬಾಹ್ಯಾಕಾಶದ ಲೋ ಅರ್ಥ್ ಆರ್ಬಿಟ್ ನಲ್ಲಿ ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಮೂಲಕ ಲೈವ್ ಸ್ಯಾಟೆಲೈಟ್ ಅನ್ನು ಭಾರತದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಡಿಆರ್ ಡಿಒ ಯಶಸ್ವಿಯಾಗಿ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.
ಮಿಷನ್ ಶಕ್ತಿ ಎಂಬ ಹೆಸರಿನಲ್ಲಿ , ಕೇವಲ ಮೂರು ನಿಮಿಷದಲ್ಲಿ, 3,000 ಕಿ.ಮೀ ದೂರದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಯಾಟೆಲೈಟ್ ನ್ನು ಹೊಡೆದುರುಳಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಗೆ ಮಾಹಿತಿ ನೀಡಿದ್ದು, ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ದೇಶದ ವಿಜ್ಞಾನಿಗಳು ನಮ್ಮ ಹೆಮ್ಮೆ ಎಂದ ಅವರು ಈ ಸಾಧನೆ ಯಾವುದೇ ದೇಶದ ವಿರುದ್ದವಾಗಿ ಮಾಡಿರುವುದಲ್ಲ. ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಭಾರತದ ಅಭಿವೃದ್ದಿಯ ಉದ್ದೇಶದಿಂದ ಎಂದು ಸ್ಪಷ್ಟಪಡಿಸಿದ್ದಾರೆ.
ಶತ್ರುರಾಷ್ಟ್ರಗಳ ಉಪಗ್ರಹಗಳನ್ನು ವಿನಾಶಗೊಳಿಸುವ ಮಹತ್ವದ ಶಕ್ತಿ ಭಾರತಕ್ಕೆ ದೊರಕಿದ್ದು, "ಬಲಿಷ್ಟ ಭಾರತ"ದ ನಿರ್ಮಾಣಕ್ಕಾಗಿ ಈ ಸಾಧನೆ ಮಾಡಲಾಗಿದೆಯೆ ಹೊರತು , ಯಾವುದೇ ಯುದ್ದದ ವಾತಾವರಣ ಸೃಷ್ಟಿಸಲು ಅಲ್ಲ ಎಂದು ತಿಳಿಸಿದ್ದಾರೆ.