ಮಂಡ್ಯ, ಮಾ27(SS): ಸುಮಲತಾ ಒಂಟಿ ಹೆಣ್ಣಲ್ಲ, ಯಾವುದೇ ರೀತಿಯ ಬೆದರಿಕೆಗಳಿಗೆ ನಾನು ಹೆದರಲ್ಲ, ಮಂಡ್ಯ ನನ್ನ ಜೊತೆಗಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸುಮಲತಾ ಒಂಟಿ ಹೆಣ್ಣಲ್ಲ, ಅಂಬರೀಶ್ ಮೇಲಿನ ಪ್ರೀತಿಯಿಂದ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕಿಲ್ಲ. ಅಂಬರೀಶ್ ಅವರಿಗೆ ಪ್ರೀತಿ ನೀಡಿದ ಜನರನ್ನು ಬಿಟ್ಟು ನಾನು ಎಲ್ಲಿಯೂ ಹೋಗಲ್ಲ. ಕ್ಷೇತ್ರದ ರೈತ ಸಂಘಗಳು ನನಗೆ ಬೆಂಬಲವನ್ನು ನೀಡಿವೆ. ಚುನಾವಣೆ ಅಖಾಡದಲ್ಲಿ ಸುಮಲತಾ ಹೆಸರಿನ ನೂರು ಅಭ್ಯರ್ಥಿಗಳನ್ನು ಹಾಕಿಕೊಳ್ಳಲಿ. ಸುಮಲತಾ ಹೆಸರಿನ ಮೂವರ ನಾಮಪತ್ರ ಹಾಕಿಸಿರೋದು ರಾಜಕೀಯ ಅಲ್ಲ ಕುತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುತಂತ್ರದಿಂದ ಗೆಲ್ಲಬಹುದು ಲೆಕ್ಕ ಹಾಕಿದ್ದರೆ ಅದು ಕೇವಲ ಭ್ರಮೆ. ನಿಮ್ಮ ಈ ಕುತಂತ್ರಗಳಿಗೆ ಮಂಡ್ಯದ ಜನರ ಉತ್ತರ ನೀಡುವ ಕಾಲ ಬಂದಿದೆ. ಅವಶ್ಯವಿದ್ದರೆ ನಿಮ್ಮ ಅಭ್ಯರ್ಥಿಯ ಹೆಸರನ್ನು ಸಮಲತಾ ಎಂದು ಬದಲಿಸಿಕೊಳ್ಳಲಿ. ಇಂತಹ ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ತಿಳಿಸಿದರು.
ನಿಮ್ಮ ಮಾತುಗಳಿಂದ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವ ಸ್ಫೂರ್ತಿ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಬ್ಬರನ್ನೊಬ್ಬರು ಬೈದುಕೊಂಡು ಓಡಾಡುತ್ತಿದ್ದವರು ಇಂದು ಜೊತೆಯಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಯಾರು ಕಳ್ಳೆತ್ತು..? ಯಾರು ಉಳುಮೆ ಮಾಡುವ ಎತ್ತು ಎಂಬುದನ್ನು ಮಂಡ್ಯದ ಜನರು ಕೆಲವೇ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಮಂಡ್ಯದ ಜನ ನಮ್ಮ ಜೊತೆ ಇದ್ದಾರೆ. ಈ ರೀತಿಯ ನಿಮ್ಮ ಹೇಳಿಕೆಯಿಂದ ಯಶ್, ದರ್ಶನ್ ಹೆದರಿಕೊಳ್ಳಲ್ಲ. ಶೂಟಿಂಗ್ ಶೆಡ್ಯೂಲ್ ಮುಗಿದ ನಂತರ ಏಪ್ರಿಲ್ 1 ಅಥವಾ 2ರಿಂದ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಕ್ಕರೆ ನಾಡು ಮಂಡ್ಯದಲ್ಲಿ ಯಾವ ಜೋಡುತ್ತೆಗಳು ಗೆಲ್ಲುತ್ತವೆ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನನ್ನ ಜೋಡೆತ್ತುಗಳ ಮುಂದೆ ಮೈತ್ರಿಯ ಎತ್ತುಗಳು ಏನು ಅಲ್ಲ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.