ಚಿಕ್ಕಮಗಳೂರು,ಮಾ 27(MSP): ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ವಿರುದ್ದ ಚಿಕ್ಕಮಗಳೂರಿನ ಜೆಎಂಎಫ್ ಸಿ ಕೋರ್ಟ್ ಬುಧವಾರ ಅರೆಸ್ಟ್ ವಾರಂಟ್ ಜಾರಿಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದ ದೀಪಕ್ ಮಯೂರ್, ವಾರಾಸ್ದಾರ ಧಾರವಾಹಿ ತಂಡದ ವಿರುದ್ದ ದೂರು ದಾಖಲು ಮಾಡಿದ್ದರು. ವಾರಾಸ್ದಾರ ಧಾರವಾಹಿಯೂ ಸುದೀಪ್ ಅವರ ನಿರ್ಮಾಣದಲ್ಲಿ ಮೂಡಿಬಂದಿತ್ತು. ಶೂಟಿಂಗ್ ಗಾಗಿ ದೀಪಕ್ ಮಯೂರ್ ಅವರ ಮನೆ ಹಾಗೂ ತೋಟವನ್ನು ಬಾಡಿಗೆ ರೂಪದಲ್ಲಿ ನೀಡಲಾಗಿತ್ತು. ದಿನಕ್ಕೆ 6 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ ಬಾಡಿಗೆ ಬಾಕಿ ಉಳಿಸಿದ್ದು ಮಾತ್ರವಲ್ಲದೆ, ಶೂಟಿಂಗ್ ಸಂದರ್ಭದಲ್ಲಿ ಧಾರವಾಹಿಯ ತಂಡ ತೋಟವನ್ನು ಹಾಳುಗೆಡವಲಾಗಿದೆ.
ತನಗೆ ಸುಮಾರು ಒಂದೂವರೆ ಕೋಟಿ ರೂಪಾಯಿಯಷ್ಟು ನಷ್ಟವಾಗಿದ್ದು, ಈ ಹಣವನ್ನು ತಮಗೆ ನೀಡಬೇಕು ದೀಪಕ್ ಧಾರಾವಾಹಿ ತಂಡಕ್ಕೆ ತಿಳಿಸಿದ್ದರು. ಆದರೆ ಈ ಬೇಡಿಕೆಯನ್ನು ಸುದೀಪ್ ಕ್ರಿಯೇಶನ್ಸ್ ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ಮನೆ ಮಾಲೀಕ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಮಾ.27 ರ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಸುದೀಪ್ ಗೈರಾಗಿದ್ದರಿಂದ ಜೆಎಂಎಫ್ ಸಿ ಕೋರ್ಟ್ ಅರೆಸ್ಟ್ ವಾರಂಟ್ ಹೊರಡಿಸಿದೆ.