ಲಖನೌ, ಮಾ28(SS): ಪಕ್ಷ ಬಯಸಿದಲ್ಲಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸಿದ್ಧ, ಪಕ್ಷ ಸಂಘಟನೆಯೇ ಸದ್ಯ ನನ್ನ ಗುರಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಎರಡನೇ ಸುತ್ತಿನ ಪ್ರಚಾರಕ್ಕೆ ಉತ್ತರ ಪ್ರದೇಶದಲ್ಲಿ ಚಾಲನೆ ನೀಡಿದ ಅವರು, ಸಹೋದರ ರಾಹುಲ್ ಗಾಂಧಿ ಅವರ ಲೋಕಸಭೆ ಕ್ಷೇತ್ರ ಅಮೇಠಿಯಲ್ಲಿ 'ಹಮಾರಾ ಬೂತ್, ಹಮಾರಾ ಗೌರವ್' ಕಾರ್ಯಕ್ರಮದಲ್ಲಿ ಪಕ್ಷದ ಕಾರರ್ಯಕರ್ತರೊಂದಿಗೆ ಸಂವಾದ ನಡೆಸಿದ ಮಾತನಾಡಿರು. ಹಲವು ಪ್ರಚಾರ ಸಭೆಗಳನ್ನು ನಡೆಸಿ, ಕೇಂದ್ರದಲ್ಲಿರುವುದು ಹುಸಿ ಭರವಸೆಗಳ ಜೂಮ್ಲಾಬಾಜಿ ಸರಕಾರ ಎಂದು ಟೀಕಿಸಿದರು.
ಪಕ್ಷ ಬಲವರ್ಧನೆ ಸದ್ಯದ ನನ್ನ ಕಾಯಕ. ಒಂದೊಮ್ಮೆ ಪಕ್ಷ ಬಯಸಿದರೆ ಚುನಾವಣೆಗೆ ನಿಲ್ಲಲು ನಾನು ರೆಡಿ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಈ ಮೊದಲು ತಾಯಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿರುವ ರಾಯ್ಬರೇಲಿಯಿಂದ ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಕಣಕ್ಕಿಳಿದಿರುವ ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಮಾರ್ಚ್ 21ರಂದು ಪ್ರಿಯಾಂಕಾ ಅವರು ಪ್ರಯಾಗ್ರಾಜ್ನಿಂದ ವಾರಾಣಸಿವರೆಗೆ 'ಗಂಗಾ ಯಾನ'ದ ಮೂಲಕ ಪ್ರಚಾರ ನಡೆಸಿದ್ದರು. ಮಾ.28ರಂದು ರಾಯ್ ಬರೇಲಿ ಹಾಗೂ ಫೈಜಾಬಾದ್ನಲ್ಲಿ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ.